ದಾವಣಗೆರೆ: ತನ್ನ ಅನೈತಿಕ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಸುಪಾರಿ ಹಂತಕರಿಂದ ಬರ್ಬರವಾಗಿ ಕೊಲೆ ಮಾಡಿಸಿ, ಬಳಿಕ ಗಂಡ ನಾಪತ್ತೆಯಾಗಿದ್ದಾನೆಂದು ನಾಟಕವಾಡಿದ್ದ ಪತ್ನಿಯ ಕೃತ್ಯವನ್ನು ಜಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ.
ತಾಲ್ಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದ ಬಸವರಾಜ್ (37) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸುನೀತಾ, ಆಕೆಯ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಹಾಗೂ ಕೊಲೆ ಕೃತ್ಯದಲ್ಲಿ ಸಾಥ್ ನೀಡಿದ್ದ ಓಂಕಾರಪ್ಪ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿ, ಓಂಕಾರಪ್ಪನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ: ಸುನೀತಾ ಹಾಗೂ ತಿಪ್ಪೇಸ್ವಾಮಿ ನಡುವಿನ ಅಕ್ರಮ ಸಂಬಂಧದ ವಿಚಾರ ತಿಳಿದು ಪತಿ ಬಸವರಾಜ್ ಮನೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಪ್ರೇಮಿಗಳು, ಬಸವರಾಜ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು. ಕೊಲೆ ಮಾಡಲು ಹಂತಕರಿಗೆ ₹2 ಲಕ್ಷ ಸುಪಾರಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಸಾಲದ ಆಮಿಷವೊಡ್ಡಿ ಕಾರಿನಲ್ಲಿ ಕರೆದೊಯ್ದು ಹತ್ಯೆ: ಬಸವರಾಜ್‌ಗೆ ಸಾಲ ಕೊಡಿಸುವುದಾಗಿ ನಂಬಿಸಿದ ಆರೋಪಿಗಳು, ಆತನನ್ನು ದೊಣೆಹಳ್ಳಿ ಕ್ರಾಸ್‌ನಿಂದ ಕಾರಿನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಭೀಕರವಾಗಿ ಹತ್ಯೆ ಮಾಡಿದ್ದಾರೆ. ನಂತರ ಏನೂ ತಿಳಿಯದವಳಂತೆ ನಟಿಸಿದ ಸುನೀತಾ, ತನ್ನ ಪತಿ ಕಾಣೆಯಾಗಿದ್ದಾನೆಂದು ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದಳು.
ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಜಗಳೂರು ಪೊಲೀಸರು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಮೊಬೈಲ್ ಕರೆಗಳ ವಿವರಗಳನ್ನು ಕಲೆಹಾಕಿ ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಓಂಕಾರಪ್ಪ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.