Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

CWC ನಿರ್ಣಯ ಏನು ಗೊತ್ತೇ ?

 

ದೆಹಲಿ :
ದೆಹಲಿಯಲ್ಲಿ ದಿನಾಂಕ 9-10-2023 ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯ ನಿರ್ಣಯಗಳು ಇಂತಿವೆ.

1. ಸಿಕ್ಕಿಂ, ಡಾರ್ಜಿಲಿಂಗ್‌, ಕಾಲಿಂಪಾಂಗ್‌ ಮತ್ತು ಕುರ್ಸಿಯೊಂಗ್‌ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಪ್ರವಾಹ ಹಾಗೂ ಭಾರತೀಯ ಸೇನಾಪಡೆಗಳ ಸಿಬ್ಬಂದಿಯೂ ಸೇರಿದಂತೆ ಸಂಭವಿಸಿದ ಜೀವಹಾನಿಗೆ ಸಿ.ಡಬ್ಲ್ಯು.ಸಿ. ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಾಮೂಹಿಕ ಮತ್ತು ವಿಶ್ವಾಸಾರ್ಹ ಪರಿಸರ ಪರಿಣಾಮ ಮೌಲ್ಯಮಾಪನವನ್ನು ಸೂಕ್ಷ್ಮವಾದ ಹಿಮಾಲಯನ್‌ ಪ್ರದೇಶಗಳಲ್ಲಿ ಕೈಗೊಳ್ಳುವುದರ ಅಗತ್ಯತೆಯನ್ನು ಸಿ.ಡಬ್ಲ್ಯುಸಿ ಒತ್ತು ನೀಡುತ್ತದೆ. ಕೇಂದ್ರ ಸರ್ಕಾರವು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಎಲ್ಲ ಅಗತ್ಯ ನೆರವು ಒದಗಿಸುವಂತೆ ಸಿಡಬ್ಲ್ಯುಸಿಯು ಒತ್ತಾಯಿಸುತ್ತದೆ. ಜೊತೆಗೆ ರಾಜಕೀಯ ಪಕ್ಷಪಾತ ಧೋರಣೆಯನ್ನು ಬದಿಗಿಟ್ಟು ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸಿ.ಡಬ್ಲ್ಯು.ಸಿ. ಒತ್ತಾಯಿಸಿದೆ.

2. ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿರುವುದನ್ನು ಸಿ.ಡಬ್ಲ್ಯು.ಸಿ. ಸ್ವಾಗತಿಸುತ್ತದೆ. ಸಮೀಕ್ಷೆಯ ಅಂಕಿ ಅಂಶಗಳಿಂದ ವಿವಿಧ ಜಾತಿಗಳ ಜನಸಂಖ್ಯೆ ಪ್ರಮಾಣ ಹಾಗೂ ಪ್ರಾತಿನಿಧ್ಯದ ನಡುವೆ ಭಾರಿ ಅಂತರ ಇರುವುದು ಬಹಿರಂಗಗೊಂಡಿದ್ದು, ಸಾಮಾಜಿಕ ನ್ಯಾಯ ಖಾತರಿಪಡಿಸುವ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎನ್ನುವುದನ್ನು ತೋರಿಸುತ್ತದೆ. ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ರೋಹಿಣಿ ಆಯೋಗದ ಧ್ಯೇಯೋದ್ದೇಶವನ್ನು ಸಿಡಬ್ಲ್ಯುಸಿ ಸ್ವಾಗತಿಸುತ್ತದೆ. ಆದರೆ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತಂತೆ ಸವಿವರವಾದ ದತ್ತಾಂಶವಿಲ್ಲದೆ ಈ ಪ್ರಕ್ರಿಯೆ ಅಪೂರ್ಣವಾಗಲಿದೆ ಎಂದು ಸಿಡಬ್ಲ್ಯುಸಿ ಗಮನಿಸಿದ್ದಲ್ಲದೆ, ಇದನ್ನು ಕೇಂದ್ರ ಸರ್ಕಾರವು 2011ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶದಿಂದ ಪಡೆಯ ಬಹುದು ಅಥವಾ ಹೊಸದಾಗಿ ಜಾತಿ ಸಮೀಕ್ಷೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿತು.
ಈ ಬೆಳವಣಿಗೆಗಳು ರಾಷ್ಟ್ರವ್ಯಾಪಿ ಜಾತಿ ಸಮೀಕ್ಷೆ ನಡೆಸುವುದರ ಮಹತ್ವವನ್ನು ಎತ್ತಿ ಹಿಡಿದಿದೆ. ಇದರಿಂದ ದೇಶದ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿ ದೊರೆಯುವುದಲ್ಲದೆ ಸರ್ಕಾರದ ನೀತಿ ನಿರೂಪಣೆಗೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಖಾತರಿ ಪಡಿಸಲು ಅತ್ಯುತ್ತಮ ದತ್ತಾಂಶ ಆಧಾರಿತ ತಳಹದಿ ಒದಗಿಸಿದಂತಾಗುತ್ತದೆ. ಮೋದಿ ಸರ್ಕಾರವು 2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ವರದಿಯನ್ನು ಬಹಿರಂಗ ಪಡಿಸದೆ ಹಿಂದುಳಿದ ವರ್ಗಗಳು ಮತ್ತು ಇತರ ಅವಕಾಶವಂಚಿತ ಸಮುದಾಯಗಳನ್ನು ವಂಚಿಸಿದೆ. 2021 ರಲ್ಲಿ ನಡೆಸಬೇಕಾಗಿದ್ದ ಜನಗಣತಿಯನ್ನು ಮುಂದೂಡುವ ಮೂಲಕ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಜಿ20 ರಾಷ್ಟ್ರಗಳಲ್ಲಿ ಜನಗಣತಿ ಮಾಡಲು ವಿಫಲವಾದ ಏಕೈಕ ದೇಶವೆನಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಇದಲ್ಲದೆ ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರತಿ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆಯ ಅಗತ್ಯದ ಕುರಿತು ಹಲವಾರು ನಿಯೋಗಗಳು ತಮ್ಮ ಅಭಿಪ್ರಾಯ ತಿಳಿಸಿದ್ದು, 85ನೇ ಕಾಂಗ್ರೆಸ್‌ ಅಧಿವೇಶನದ ರಾಯ್‌ಪುರ್‌ ಘೋಷಣೆಯಲ್ಲಿಯೂ ಸ್ಥಾನ ಪಡೆದಿದೆ.
ಆದ್ದರಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವು ತನ್ನ ನೇತೃತ್ವದ ಸರ್ಕಾರವು:
1. ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು 2021ರಲ್ಲಿ ನಡೆಸಬೇಕಾಗಿದ್ದ, ಪ್ರತಿ ದಶಕದಲ್ಲೊಮ್ಮೆ ನಡೆಸುವ ಜನಗಣತಿಯ ಭಾಗವಾಗಿ ನಡೆಸಲಿದೆ.

ii. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಅತಿ ಶೀಘ್ರದಲ್ಲೇ ಜಾರಿಗೆ ತರಲಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೂ ಸೂಕ್ತ ಪ್ರಾತಿನಿಧ್ಯ ದೊರಕಿಸಲಾಗುವುದು. ಮೋದಿ ಸರ್ಕಾರವು ಅನಗತ್ಯವಾಗಿ ಹೇರಿರುವ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಅಡಚಣೆಯನ್ನು ನಿವಾರಿಸಲಾಗುವುದು.

iii. ಜನಸಂಖ್ಯೆಯನ್ನು ಆಧರಿಸಿ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಸೌಲಭ್ಯ ಒದಗಿಸಲು ಅನುವಾಗುವಂತೆ ಶಾಸನ ರಚನೆಯ ಮೂಲಕ ಮೀಸಲಾತಿಗೆ ಶೇ. 50ರ ಮಿತಿಯನ್ನು ತೆಗೆದುಹಾಕಲಾಗುವುದು.

iv. ಮೋದಿ ಸರ್ಕಾರವು ಕೆಲವು ಪತ್ರಕರ್ತರು ಮತ್ತು ಬರಹಗಾರರ ಮೇಲೆ ನಡೆಸಿದ ದಾಳಿ ಹಾಗೂ ಭಯೋತ್ಪಾದನಾ ವಿರೋಧಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿರುವುದನ್ನು ಸಿ.ಡಬ್ಲ್ಯು.ಸಿ. ಖಂಡಿಸುತ್ತದೆ. ಸರ್ಕಾರವೇ ಹರಿಯಬಿಟ್ಟ ಪಿತೂರಿಯ ಕತೆಗಳು ಪಿಎಂ ಕೇರ್ಸ್‌ ನಿಧಿಗೆ ಚೈನೀಸ್‌ ಕಂಪೆನಿಗಳಿಂದ ದೇಣಿಗೆ ಸ್ವೀಕಾರ, ಚೀನಾದ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ಹೂಡಿಕೆ ಅವಕಾಶ, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಯಂತ್ರಿಸಲು ಸರ್ಕಾರದ ಅಸಮರ್ಥತೆ ಹಾಗೂ ಇದೆಲ್ಲಕ್ಕಿಂತ ಹೆಚ್ಚಾಗಿ ಚೀನಾ ದೇಶ ನಮ್ಮ ಗಡಿ ಭಾಗದ ಅತಿಕ್ರಮಣ ಮಾಡಿರುವುದನ್ನು ನಿರಾಕರಿಸುವ ಮೂಲಕ ಪ್ರಧಾನಮಂತ್ರಿಗಳು 19-6-2020ರಂದು ಕ್ಲೀನ್‌ ಚಿಟ್‌ ನೀಡಿರುವುದು ಕೇಂದ್ರ ಸರ್ಕಾರದ ಬೂಟಾಟಿಕೆಯನ್ನು ಬಯಲಿಗೆಳೆದಿವೆ.
ಮೋದಿ ಸರ್ಕಾರವು ಕೇಂದ್ರ ಸರ್ಕಾರದ ನಿರ್ಧಾರ ಕ್ರಮಗಳನ್ನು ಪ್ರಶ್ನಿಸುವವರ ವಿರುದ್ಧ, ವ್ಯಾಪಕವಾಗಿ ಕಾನೂನಿನ ಹಾಗೂ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯನ್ನು ಮಾಡಿಕೊಂಡಿದೆ. ಇಂತಹ ಬಲವಂತದ ಹಾಗೂ ಕಾನೂನು ಬಾಹಿರ ಕ್ರಮಗಳು ಮಾಧ್ಯಮಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ. ನಾಗರಿಕರ, ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸುವ ಪತ್ರಕರ್ತರು, ರಾಜಕಾರಣಿಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ ಹಾಗೂ ಆಮೂಲಕ ವಿಶ್ವದಲ್ಲಿ ಪ್ರಜಾಪ್ರಭುತ್ವದ ದೇಶವಾಗಿ ಭಾರತ ಹೊಂದಿರುವ ಸ್ಥಾನ ಇಳಿಮುಖವಾಗುತ್ತಿದೆ. ಪ್ರಧಾನ ಮಂತ್ರಿ ಹಾಗೂ ಬಿಜೆಪಿಯವರು ರಾಜಕಾರಣವನ್ನು ಯಾವ ಮಟ್ಟಕ್ಕೆ ಒಯ್ದಿದ್ದಾರೆಂದರೆ, ನಾಥೂರಾಮ್‌ ಘೋಡ್ಸೆ ಮಹಾತ್ಮಾ ಗಾಂಧಿ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೆಸ್‌ ನಾಯಕರ ವಿರುದ್ಧ ನಡೆದುಕೊಂಡ ಮಾದರಿಯಲ್ಲಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ವಿರುದ್ಧ ಹಿಂಸೆಯನ್ನು ಪ್ರಚೋದಿಸಲು ಅಧಿಕೃತ ಪೋಸ್ಟರುಗಳನ್ನು ಮಾಡಲಾಗುತ್ತದೆ. ಮೋದಿ ಸರ್ಕಾರದ ಈ ದಾಳಿಯು ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ ಎಂಬುದನ್ನು ಸಿಡಬ್ಲ್ಯುಸಿ ಗಮನಿಸಿದೆ. ಆದರೆ ಭಾರತೀಯರು ಇಂತಹ ತಂತ್ರಗಳಿಗೆ ಮರುಳಾಗುವುದಿಲ್ಲ.

3. ಮಣಿಪುರದಲ್ಲಿ ಸಾಂವಿಧಾನಿಕ ಸರ್ಕಾರದ ವ್ಯವಸ್ಥೆಯು ಕುಸಿದು ಬಿದ್ದಿರುವುದು ಹಾಗೂ ಅಮಾನವೀಯ ದುರಂತ ಮುಂದುವರೆದಿರುವ ಕುರಿತು ಸಿಡಬ್ಲ್ಯುಸಿ ತೀವ್ರ ಅತಂಕ ವ್ಯಕ್ತಪಡಿಸುತ್ತದೆ. ಐದು ತಿಂಗಳ ನಂತರವೂ ಪ್ರಧಾನಮಂತ್ರಿಗಳು ಮಣಿಪುರದ ಜನರನ್ನು ಹಾಗೂ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಸಶಸ್ತ್ರ ಜನರ ಗುಂಪುಗಳಿಂದ ದೌರ್ಜನ್ಯ ಮತ್ತು ಬೆದರಿಕೆಗಳಂತಹ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆಯು ಕುಸಿದು ಬಿದ್ದಿದೆ. ಮಣಿಪುರ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿಯವರನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ತನ್ನ ಬೇಡಿಕೆಯನ್ನು ಸಿಡಬ್ಲ್ಯುಸಿ ಪುನರುಚ್ಛರಿಸುತ್ತದೆ.

4. ಭಾರತೀಯ ಕುಟುಂಬಗಳ ಒಟ್ಟಾರೆ ಹಣಕಾಸಿನ ಸಂಪತ್ತು 2022-23ರಲ್ಲಿ ಕಳೆದ ಐದು ದಶಕಗಳಲ್ಲೇ ಅತಿ ಕಡಿಮೆ ಅಂದರೆ ಶೇ. 5.1ಕ್ಕೆ ಇಳಿಕೆಯಾಗಿರುವುದಾಗಿ ರಿಸರ್ವ್‌ ಬ್ಯಾಂಕಿನ ದತ್ತಾಂಶವನ್ನು ಅತ್ಯಂತ ಕಳವಳಕಾರಿಯೆಂದು ಸಿಡಬ್ಲ್ಯುಸಿ ಗುರುತಿಸಿದೆ. ಅಂತೆಯೇ ಕಳೆದ ನಾಲ್ಕು ದಶಕಗಳಲಿಯೇ ಅತಿ ಕಡಿಮೆ ಆದಾಯ ಬೆಳವಣಿಯನ್ನೂ ದಾಖಲಿಸಲಾಗಿದೆ. ಏರಿಕೆಯಾಗದ ವೇತನ, ಹೆಚ್ಚಿನ ಹಣದುಬ್ಬರ ಹಾಗೂ ವ್ಯಾಪಕವಾದ ನಿರುದ್ಯೋಗ ಸಮಸ್ಯೆಯ ಪರಿಣಾಮವಾಗಿ ಭಾರತದ ಲಕ್ಷಾಂತರ ಕುಟುಂಬಗಳು ತಮ್ಮ ದೈನಂದಿನ ಅಗತ್ಯಗಳಿಗೆ ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೋದಿ ಸರ್ಕಾರದ ಜನ ವಿರೋಧಿ ಹಾಗೂ ಉಳ್ಳವರ ಪರವಾದ ಆರ್ಥಿಕ ನೀತಿಗಳ ಫಲವಾಗಿ ಈ ಪರಿಸ್ಥಿತಿ ಉದ್ಭವಿಸಿದ್ದು, ಆರ್ಥಿಕತೆಯ ಪ್ರತಿ ವಲಯದಲ್ಲೂ ಸಂಪತ್ತು ಮತ್ತು ಅಧಿಕಾರ ಕೆಲವೇ ಜನರ ಕೈಯಲ್ಲಿ ಕ್ರೋಢೀಕರಣವಾಗಿದೆ ಎಂದು ಸಿ.ಡಬ್ಯು.ಸಿ. ಭಾವಿಸಿದೆ. ಮೋದಿ ಸರ್ಕಾರದ ಕೊಡುಗೆಯಾಗಿರುವ ನಿರುದ್ಯೋಗ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಅಸಮಾನತೆಯ ನಿವಾರಣೆಗೆ ದೇಶದ ಆರ್ಥಿಕ ನೀತಿಯನ್ನು ಸಮಗ್ರವಾಗಿ ಪುನರ್‌ರಚಿಸುವ ಅಗತ್ಯವಿದೆ ಎಂದು ರಾಯ್‌ಪುರ ಎಐಸಿಸಿ ಅಧಿವೇಶನದಲ್ಲಿ ಮಾಡಿದ ನಿರ್ಣಯವನ್ನು ಸಿಡಬ್ಲ್ಯುಸಿ ಎತ್ತಿ ಹಿಡಿಯುತ್ತದೆ.

5. ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳು ಜನರಿಗೆ ಪರಿಹಾರ ನೀಡುವ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಪ್ರಜಾಪ್ರಭುತ್ವಕ್ಕೆ ಒದಗಿರುವ ಗಂಡಾಂತರ ಹಾಗೂ ಪ್ರತಿ ದಿನ ಬಿಗಡಾಯಿಸುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೀರ್ಘಾವಧಿ ಬಾಳುವ ಪರಿಹಾರ ಕ್ರಮಗಳು ಅಗತ್ಯ. ಜನರ ಅಧಿಕಾರ ವ್ಯಾಪ್ತಿಯಲ್ಲಿರುವ ಒಂದೇ ಪರಿಹಾರವೆಂದರೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಜನವಿರೋಧಿ ಬಿಜೆಪಿ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯುವುದು. ಈ ಗುರಿ ಸಾಧನೆಗೆ ಸಿ.ಡಬ್ಲ್ಯು.ಸಿಯು ತನ್ನ ಎಲ್ಲ ಸದಸ್ಯರು ಹಾಗೂ ಬೆಂಬಲಿಗರು ಮುಂದಿನ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ, ಸಂಪೂರ್ಣ ದೃಢ ಸಂಕಲ್ಪ ಹಾಗೂ ಸಮರ್ಪಣಾ ಭಾವದಿಂದ ಶ್ರಮಿಸುವಂತೆ ಕರೆ ನೀಡುತ್ತದೆ.

6. ಅಂತಿಮವಾಗಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿರುವ ಕುರಿತು ಹಾಗೂ ಸಾವಿರಾರು ಜನರು ಸಾವನ್ನಪ್ಪಿರುವ ಕುರಿತು ತೀವ್ರ ಅಸಮಾಧಾನ ಹಾಗೂ ಆತಂಕ ವ್ಯಕ್ತಪಡಿಸುತ್ತದೆ. ಸಿಡಬ್ಲ್ಯುಸಿಯು ಪ್ಯಾಲೆಸ್ಟೀನ್‌ನ ಜನರ ಭೂಮಿ, ಸ್ವಯಂ ಆಡಳಿತ ಹಾಗೂ ಸ್ವಾಭಿಮಾನ ಮತ್ತು ಗೌರವಯುತ ಬದುಕು ನಡೆಸುವ ಹಕ್ಕುಗಳಿಗೆ ಸದಾ ಬೆಂಬಲ ನೀಡುತ್ತ ಬಂದಿದೆ. ಸಿ.ಡಬ್ಲ್ಯು.ಸಿಯು ಕೂಡಲೇ ಯುದ್ಧವಿರಾಮ ಘೋಷಿಸಿ ಮಾತುಕತೆಗಳ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಕರೆ ನೀಡುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ