ಬೆಂಗಳೂರು, ಫೆ.15 – ರಾಜ್ಯದಲ್ಲಿ ಬೇಸಿಗೆ ಕಾಲ ಇನ್ನೂ ಆರಂಭವಾಗುವ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಳ ಕಂಡುಬಂದಿದ್ದು, ಜನರು ಮಧ್ಯಾಹ್ನದ ಹೊತ್ತಿಗೆ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಶಿವರಾತ್ರಿ ವೇಳೆಗೆ ಚಳಿ ಕಡಿಮೆಯಾಗುವುದು ಸಾಮಾನ್ಯವಾದರೂ, ಈ ಬಾರಿ ಮುಂಜಾನೆ ಮಾತ್ರ ಚಳಿ ಮುಂದುವರಿದಿದ್ದು ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲ.
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ 10ರಿಂದ 12 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ 12ರಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೆ ಕಂಡುಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಕಡಿಮೆಯಾಗುತ್ತಾ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10ರಿಂದ 11 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದ್ದರೂ, ಗರಿಷ್ಠ ತಾಪಮಾನದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಹಗಲಿನ ಹೊತ್ತಿನಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಬಿಸಿಲಿನ ಬೇಗೆ ಹೆಚ್ಚು ಅನುಭವವಾಗುತ್ತಿದೆ.
ಕಳೆದ ಅಕ್ಟೋಬರ್‌ನಿಂದ ರಾಜ್ಯದಲ್ಲಿ ಮಳೆಯ ಅಭಾವ ಮುಂದುವರೆದಿದ್ದು, ಅಕಾಲಿಕ ಮಳೆಯೂ ದಾಖಲಾಗಿಲ್ಲ. ಸದ್ಯಕ್ಕೆ ಬೇಸಿಗೆ ಮಳೆಯ ಲಕ್ಷಣಗಳೂ ಕಾಣಿಸದ ಹಿನ್ನೆಲೆ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಜನರು ಹಣ್ಣು, ಎಳನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿರುವುದರಿಂದ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಈಗಾಗಲೇ 32 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಕರಾವಳಿ ಭಾಗದಲ್ಲಿ 35 ಡಿಗ್ರಿಗಿಂತ ಹೆಚ್ಚು ದಾಖಲಾಗುತ್ತಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬರುತ್ತಿದೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಹೆಚ್ಚಾಗಿ ಗರಿಷ್ಠ ತಾಪಮಾನದಲ್ಲಿ 4ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರಳಿನಲ್ಲಿ ಕೆಲಸ ಮಾಡುವುದು, ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದು ಹಾಗೂ ಅನಿವಾರ್ಯವಾಗಿ ಹೊರಗೆ ಹೋಗುವಾಗ ಕೊಡೆ, ಟೋಪಿ ಬಳಸುವುದು ಒಳಿತು ಎಂದು ವೈದ್ಯರು ಹಾಗೂ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.