ನವದೆಹಲಿ: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸುರಕ್ಷಿತ ಆಹಾರ ಪದಾರ್ಥಗಳು ದೊರೆಯುವಂತೆ ನೋಡಿಕೊಳ್ಳಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಠಿಣ ಕ್ರಮಕ್ಕೆ ಮುಂದಾಗಿದೆ.
ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪ್ರಾಧಿಕಾರ, ಖ್ಯಾತ ಮಸಾಲೆ ತಯಾರಿಕಾ ಸಂಸ್ಥೆ ಎವರೆಸ್ಟ್ಗೆ ತನ್ನ ಜೀರಿಗೆ ಪುಡಿಯ ನಿರ್ದಿಷ್ಟ ಬ್ಯಾಚ್ ಅನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸೂಚಿಸಿದೆ. ಇದರೊಂದಿಗೆ, ನೆಸ್ಲೆ ಇಂಡಿಯಾದ ಕಡಿಮೆ ಕೊಬ್ಬಿನ ಡೇರಿ ವೈಟ್ನರ್ ಕಳಪೆ ಮತ್ತು ಅಸುರಕ್ಷಿತ ಎಂದು ಘೋಷಿಸಿರುವ ನಿಯಂತ್ರಕ ಮಂಡಳಿಯು ಬೇಕರಿ ಸಂಸ್ಥೆಯೊಂದರ ಪರವಾನಗಿಯನ್ನು ಅಮಾನತುಗೊಳಿಸಿದೆ.
ಎವರೆಸ್ಟ್ ಜೀರಿಗೆ ಪುಡಿಯಲ್ಲಿ ಅತಿಯಾದ ಕೀಟನಾಶಕ ಅಂಶ
ಗೋವಾದಲ್ಲಿರುವ ಖಾಸಗಿ ರೆಸಾರ್ಟ್ ಒಂದರಿಂದ ಸಂಗ್ರಹಿಸಲಾಗಿದ್ದ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಪ್ಯಾಕ್ ಮಾಡಲಾದ ಜೀರಿಗೆ ಪುಡಿಯ (Cumin Powder) ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಯೋಗಾಲಯದ ವಿಶ್ಲೇಷಣಾ ವರದಿಯಲ್ಲಿ, ಅನುಮತಿಸಲಾದ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಜೋಕ್ಸಿಸ್ಟ್ರೋಬಿನ್ (Azoxystrobin) ಮತ್ತು ಥಯಾಮೆಥೊಕ್ಸಮ್ (Thiamethoxam) ಎಂಬ ಕೀಟನಾಶಕಗಳ ಅಂಶ ಪತ್ತೆಯಾಗಿದೆ. ಆಹಾರ ಸುರಕ್ಷತಾ ಕಾಯ್ದೆಯಡಿ ಈ ಮಾದರಿಯನ್ನು ‘ಅಸುರಕ್ಷಿತ’ ಎಂದು ಘೋಷಿಸಲಾಗಿದ್ದು, ಈ ದೋಷಪೂರಿತ ಬ್ಯಾಚ್ನ (ಬ್ಯಾಚ್ ಸಂಖ್ಯೆ: E080668761) ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಕೂಡಲೇ ಹಿಂಪಡೆಯುವಂತೆ (Recall) ಕಂಪನಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜೊತೆಗೆ, ಮರುಕಳಿಸದಂತೆ ಕೈಗೊಂಡ ಸುಧಾರಣಾ ಕ್ರಮಗಳ ಕುರಿತು ನಿಗದಿತ ಸಮಯದಲ್ಲಿ ವರದಿ ಸಲ್ಲಿಸುವಂತೆ ತಾಕೀತು ಮಾಡಲಾಗಿದೆ.
https://twitter.com/fssaiindia/status/2106679300237963642
ನೆಸ್ಲೆ ‘ಡೇರಿ ವೈಟ್ನರ್’ ಕಳಪೆ: ಕಂಪನಿಯಿಂದ ಸ್ಪಷ್ಟನೆ
ಮತ್ತೊಂದೆಡೆ, ನವದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಪ್ರಸಿದ್ಧ 'ದಿ ಲಲಿತ್' ಹೋಟೆಲ್ನಲ್ಲಿ ಸಂಗ್ರಹಿಸಲಾಗಿದ್ದ ನೆಸ್ಲೆ ಇಂಡಿಯಾದ ‘ಲೋ-ಫ್ಯಾಟ್ ಡೇರಿ ವೈಟ್ನರ್’ (Low-Fat Dairy Whitener) ಮಾದರಿಯು ಕಳಪೆ ಮತ್ತು ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ. ಆಹಾರ ತಜ್ಞರ ವರದಿಯ ಅನ್ವಯ ಈ ಉತ್ಪನ್ನವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ನಿಯಮಗಳನ್ನು ಉಲ್ಲಂಘಿಸಿದ್ದು, ಹೋಟೆಲ್ ಆಡಳಿತ ಮಂಡಳಿಗೆ ಈ ಕುರಿತು ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ನೆಸ್ಲೆ ಇಂಡಿಯಾ, ತಾವು ಎಲ್ಲಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ತಮ್ಮ ಉತ್ಪನ್ನವು ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.
ಸ್ವಚ್ಛತಾ ಲೋಪ: ಬೇಕರಿ ಲೈಸೆನ್ಸ್ ರದ್ದು
ಆಹಾರ ಸುರಕ್ಷತೆಯ ತಪಾಸಣೆ ವೇಳೆ ತೀವ್ರ ಪ್ರಮಾಣದ ನೈರ್ಮಲ್ಯ ಕೊರತೆ ಹಾಗೂ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ‘ಕ್ರಿಯೇಟಿವ್ ಬೇಕರ್ಸ್ ಅಂಡ್ ಕನ್ಫೆಕ್ಷನರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಎಫ್ಎಸ್ಎಸ್ಎಐ ಪರವಾನಗಿಯನ್ನು ಪ್ರಾಧಿಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಬ್ಬದ ದಿನಗಳಲ್ಲಿ ಯಾವುದೇ ಲೋಪಗಳನ್ನು ಸಹಿಸುವುದಿಲ್ಲ ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.