ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಅವಧಿ ಮುಗಿದ, ಹಾನಿಗೊಳಗಾದ ಹಾಗೂ ತಿರಸ್ಕರಿಸಲ್ಪಟ್ಟ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲದ ಮೇಲೆ ದಾಳಿ ನಡೆಸಿ 48 ಲಕ್ಷ ರೂಪಾಯಿ ಮೌಲ್ಯದ ಸರಕನ್ನು ಜಪ್ತಿ ಮಾಡಿದ್ದು, ಈ ಸಂಬಂಧ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ನಿರ್ದೇಶಕ ಹಾಗೂ ಒಂಬತ್ತು ಜನರ ವಿರುದ್ಧ ಠಾಣೆಯ ಶಾಂತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಅಕ್ಟೋಬರ್ 14 ಮತ್ತು 15 ರಂದು ಠಾಣೆ ಹಾಗೂ ಪುಣೆ ಜಿಲ್ಲೆಗಳ ಹಲವು ಭಾಗಗಳಲ್ಲಿ ಏಕಕಾಲಕ್ಕೆ ನಡೆದ ಕಾರ್ಯಾಚರಣೆಯಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್, ಝೊಮ್ಯಾಟೋ ಹೈಪರ್ಪ್ಯೂರ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಪೂರೈಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾಶಪಡಿಸಬೇಕಾಗಿದ್ದ ಅವಧಿ ಮುಗಿದ ಹಾಗೂ ಹಾನಿಗೊಳಗಾದ ಆಹಾರ ಪದಾರ್ಥಗಳನ್ನು ವಿಲೇವಾರಿ ಏಜೆನ್ಸಿಗಳು, ರಹಸ್ಯ ವಿಂಗಡಣಾ ಕೇಂದ್ರಗಳು ಹಾಗೂ ಬ್ರೋಕರ್ಗಳ ಮೂಲಕ ಮರಳಿ ಮಾರುಕಟ್ಟೆಗೆ ತರಲಾಗುತ್ತಿತ್ತು ಎಂಬುದು ಎಫ್ಡಿಎ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಉತ್ಪನ್ನಗಳನ್ನು ಸಂಪೂರ್ಣವಾಗಿ ನಾಶಪಡಿಸದೆಯೇ ವಿಲೇವಾರಿ ಏಜೆನ್ಸಿಗಳು ನಕಲಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದುದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಭಿವಂಡಿಯಲ್ಲಿರುವ ರಹಸ್ಯ ಗೋದಾಮುಗಳಲ್ಲಿ ಕಸದಂತಿದ್ದ ಪದಾರ್ಥಗಳಿಂದ ಮಾರಾಟ ಮಾಡಲು ಯೋಗ್ಯವೆನಿಸುವ ಪ್ಯಾಕೆಟ್ಗಳನ್ನು ಪ್ರತ್ಯೇಕಿಸಿ ಸ್ಥಳೀಯ ಅಂಗಡಿಗಳಿಗೆ ಪೂರೈಸಲಾಗುತ್ತಿತ್ತು. ಎಫ್ಡಿಎ ನಡೆಸಿದ ಪರಿಶೀಲನೆಯ ಬಳಿಕ ಐದು ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ರಹದಾರಿಯಿಲ್ಲದೆ ನಡೆಯುತ್ತಿದ್ದ ನಾಲ್ಕು ಕೇಂದ್ರಗಳ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ.