ಬೆಂಗಳೂರು, ಮೇ 3: ನಟ ಚೇತನ್ ಅಹಿಂಸಾ ನೀಡಿದ ದೂರಿನ ಆಧಾರದ ಮೇಲೆ ಸಿನಿಮಾ ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆದರಿಕೆ ಹಾಗೂ ಮನೆ ಮುಂದೆ ಗಲಾಟೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಡಾ. ರಾಜ್‌ಕುಮಾರ್ ಸಮಾಧಿ ಜಾಗದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಮಾಧಿ ಜಾಗದ ಕುರಿತು ಚೇತನ್ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿ, ಕೆಲವರು ಮನೆಗೆ ನುಗ್ಗಿ ಪ್ರಶ್ನೆ ಮಾಡಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ಸಾ.ರಾ ಗೋವಿಂದ್, ಶಿವರಾಮೇಗೌಡ ಹಾಗೂ ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ಚೇತನ್ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಚೇತನ್, ಕಳೆದ ಶನಿವಾರ ಸಾ.ರಾ ಗೋವಿಂದ್ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. “ಸಾ.ರಾ ಗೋವಿಂದ್ ಅವರ ಹಿನ್ನೆಲೆ ಬೇರೆ ರೀತಿಯಾಗಿದೆ. ಅವರು ದುರಹಂಕಾರದಿಂದ ನಡೆದುಕೊಂಡಿದ್ದಾರೆ. ಹಲವು ಸಂಘಟನೆಗಳೊಂದಿಗೆ ದಾಖಲೆ ಸಮೇತ ದೂರು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.