ಇಂಫಾಲದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಯಲ್ಲಿ 75 ಮಂದಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಹಾಗೂ ಮೂವರು ನಾಗರಿಕರು ಸೇರಿದ ಒಟ್ಟು 78 ಮಂದಿ ಆಹಾರ ವಿಷಪೂರಿತಗೊಂಡು (Food poisoning) ಶುಕ್ರವಾರ ದಾಖಲಾಗಿದ್ದಾರೆ.
ಬೆಳಗಿನ ಉಪಾಹಾರ ಸೇವಿಸಿದ ಬಳಿಕ ಸತತವಾಗಿ ವಾಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಡೀ ಬಿಎಸ್ಎಫ್ ಕಂಪನಿಯ ಸಿಬ್ಬಂದಿಯನ್ನು ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ (OPD) ಕರೆತರಲಾಗಿದೆ ಎಂದು ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಡಾ. ರಮೇಶ್ವರ್ ಸಿಂಗ್ ತಿಳಿಸಿದ್ದಾರೆ. ಎಲ್ಲ ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅವರ ಸ್ಥಿತಿಯನ್ನು ಹತೋಟಿಯಲ್ಲಿಡಲು ಅಗತ್ಯವಾದ ದ್ರವ ಪದಾರ್ಥಗಳನ್ನು ನೀಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಎಲ್ಲರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.