ನವದೆಹಲಿ: ಉದ್ಯೋಗ ಬದಲಾಯಿಸುವ ಭರದಲ್ಲಿ ಅಥವಾ ದೀರ್ಘಕಾಲದ ಉದ್ಯೋಗದ ನಂತರ ಹಳೆಯ ಪ್ರಾವಿಡೆಂಟ್ ಫಂಡ್ (PF) ಖಾತೆಯ ವಿವರಗಳು ಮರೆತುಹೋಗುವುದು ಉದ್ಯೋಗಿಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಯುನಿವರ್ಸಲ್ ಅಕೌಂಟ್ ನಂಬರ್ (UAN) ವ್ಯವಸ್ಥೆ ಜಾರಿಗೆ ಬರುವ ಮುನ್ನ ಕಂಪನಿ ಬದಲಾಯಿಸಿದಾಗ ಹೊಸ ಪಿಎಫ್ ಖಾತೆ ತೆರೆಯಲಾಗುತ್ತಿತ್ತು. ಇದರಿಂದಾಗಿ ಹಳೆಯ ಖಾತೆಯಲ್ಲಿದ್ದ ಹಣ ಹಾಗೆಯೇ ಉಳಿದು, ಹಲವರಿಗೆ ಅದರ ವಿವರಗಳೇ ಸಿಗದೆ ಪರದಾಡುವಂತಾಗಿದೆ. ಇಂತಹ ಹಳೆಯ ಮತ್ತು ನಿಷ್ಕ್ರಿಯ (Inoperative) ಪಿಎಫ್ ಖಾತೆಗಳನ್ನು ಪತ್ತೆಹಚ್ಚಿ, ಆ ಹಣವನ್ನು ಪ್ರಸ್ತುತ ಸಕ್ರಿಯ ಖಾತೆಗೆ ವರ್ಗಾಯಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸರಳ ಡಿಜಿಟಲ್ ಮಾರ್ಗಸೂಚಿಯನ್ನು ಒದಗಿಸಿದೆ.
ನಿಷ್ಕ್ರಿಯ ಖಾತೆಯಾಗುವುದು ಯಾವಾಗ? ಬಡ್ಡಿ ಸಿಗುತ್ತದೆಯೇ?
ಉದ್ಯೋಗ ತೊರೆದ ನಂತರ ಸತತ 36 ತಿಂಗಳುಗಳ ಕಾಲ ಯಾವುದೇ ವಂತಿಗೆ (Contribution) ಜಮೆಯಾಗದಿದ್ದರೆ ಅಂತಹ ಖಾತೆಯನ್ನು ಇಪಿಎಫ್‌ಒ ನಿಯಮಗಳ ಪ್ರಕಾರ 'ಇನ್‌ಆಪರೇಟಿವ್' ಅಥವಾ ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ನೌಕರನ ವಯಸ್ಸು ನಿವೃತ್ತಿ ವಯಸ್ಸು (58 ವರ್ಷ) ತಲುಪುವವರೆಗೆ ಆ ಮೊತ್ತದ ಮೇಲೆ ನಿಯಮಿತವಾಗಿ ಸರ್ಕಾರದ ಬಡ್ಡಿ ಜಮೆಯಾಗುತ್ತಿರುತ್ತದೆ. 58 ವರ್ಷ ಮೀರಿದ ನಂತರವೂ ಕ್ಲೈಮ್ ಮಾಡದಿದ್ದರೆ ಆ ಮೊತ್ತಕ್ಕೆ ಬಡ್ಡಿ ನೀಡುವುದನ್ನು ನಿಲ್ಲಿಸಲಾಗುತ್ತದೆ ಮತ್ತು ಅಂತಿಮವಾಗಿ ಅದು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಳೆಯ ಹಣವನ್ನು ಆದಷ್ಟು ಬೇಗ ಕ್ಲೈಮ್ ಮಾಡುವುದು ಉತ್ತಮ.
ಹಳೆಯ ಪಿಎಫ್ ಖಾತೆ ಪತ್ತೆ ಹಚ್ಚುವ ವಿಧಾನ
ಹಳೆಯ ಪಿಎಫ್ ಖಾತೆಯನ್ನು ಹುಡುಕಲು ಇಪಿಎಫ್‌ಒ ಪೋರ್ಟಲ್‌ನಲ್ಲಿರುವ 'Inoperative Account Helpdesk' (ನಿಷ್ಕ್ರಿಯ ಖಾತೆ ಸಹಾಯವಾಣಿ) ಸೇವೆಯನ್ನು ಬಳಸಬಹುದು. ಇದಕ್ಕೆ ಹಿಂದಿನ ಕಂಪನಿಯ ಹೆಸರು, ಉದ್ಯೋಗಕ್ಕೆ ಸೇರಿದ ಮತ್ತು ಬಿಟ್ಟ ದಿನಾಂಕ, ಪಿಎಫ್ ಖಾತೆ ಸಂಖ್ಯೆ (ಲಭ್ಯವಿದ್ದರೆ), ಜನ್ಮ ದಿನಾಂಕ ಹಾಗೂ ಮೊಬೈಲ್ ಸಂಖ್ಯೆಯಂತಹ ಮೂಲ ವಿವರಗಳನ್ನು ಒದಗಿಸಬೇಕಾಗುತ್ತದೆ. ಇವುಗಳನ್ನು ಆಧರಿಸಿ ಇಪಿಎಫ್‌ಒ ಅಧಿಕಾರಿಗಳು ಹಳೆಯ ಖಾತೆಯ ವಿವರಗಳನ್ನು ಪರಿಶೀಲಿಸಿ ಪತ್ತೆಹಚ್ಚಲು ನೆರವಾಗುತ್ತಾರೆ. ಹಳೆಯ ಕಂಪನಿಯ ಪೇ ಸ್ಲಿಪ್ ಅಥವಾ ಪಿಎಫ್ ಸ್ಟೇಟ್‌ಮೆಂಟ್ ಇದ್ದರೆ ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ.
ಯುಎಎನ್‌ಗೆ ಹಳೆಯ ಖಾತೆಯನ್ನು ಜೋಡಿಸಿ ಹಣ ವರ್ಗಾವಣೆ ಮಾಡುವುದು ಹೇಗೆ?
ಹಳೆಯ ಪಿಎಫ್ ಖಾತೆ ಸಂಖ್ಯೆ ಅಥವಾ ಐಡಿ ಪತ್ತೆಯಾದ ನಂತರ, ನೌಕರರು ಇಪಿಎಫ್‌ಒದ ಯೂನಿಫೈಡ್ ಮೆಂಬರ್ ಪೋರ್ಟಲ್ (Unified Member Portal) ಮೂಲಕ ತಮ್ಮ ಪ್ರಸ್ತುತ ಯುಎಎನ್‌ಗೆ ಹಳೆಯ ಖಾತೆಯನ್ನು ಲಿಂಕ್ ಮಾಡಬಹುದು. ಪೋರ್ಟಲ್‌ನಲ್ಲಿ 'Online Services' ವಿಭಾಗಕ್ಕೆ ತೆರಳಿ 'One Member – One EPF Account (Transfer Request)' ಆಯ್ಕೆಯನ್ನು ಆರಿಸಿಕೊಳ್ಳಬೇಕು. ಅಲ್ಲಿ ಹಳೆಯ ಕಂಪನಿಯ ಖಾತೆಯ ವಿವರಗಳನ್ನು ನಮೂದಿಸಿ, ಹಿಂದಿನ ಅಥವಾ ಪ್ರಸ್ತುತ ಉದ್ಯೋಗದಾತರಿಂದ ಡಿಜಿಟಲ್ ದೃಢೀಕರಣ (Attestation) ಕೋರಿ ಆನ್‌ಲೈನ್ ಕ್ಲೈಮ್ ಸಲ್ಲಿಸಬಹುದು.
ಆಧಾರ್ ಲಿಂಕ್ ಮತ್ತು ಇ-ಕೆವೈಸಿ ಕಡ್ಡಾಯ
ಹಳೆಯ ಹಣವನ್ನು ಸಲೀಸಾಗಿ ವರ್ಗಾಯಿಸಿಕೊಳ್ಳಲು ಪ್ರಸ್ತುತ ಯುಎಎನ್ ಖಾತೆಗೆ ಆಧಾರ್, ಪಾನ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರುವುದು ಹಾಗೂ ಇ-ಕೆವೈಸಿ (e-KYC) ಪೂರ್ಣಗೊಂಡಿರುವುದು ಕಡ್ಡಾಯವಾಗಿದೆ. ಆನ್‌ಲೈನ್ ಕ್ಲೈಮ್ ಪ್ರಕ್ರಿಯೆ ಯಶಸ್ವಿಯಾದ ನಂತರ, ಹಳೆಯ ಖಾತೆಯಲ್ಲಿದ್ದ ಹಣ ಮತ್ತು ಸೇವಾ ವಿವರಗಳು ಹೊಸ ಖಾತೆಗೆ ವರ್ಗಾವಣೆಯಾಗುತ್ತವೆ. ಇದರಿಂದ ಪಿಎಫ್ ಹಣ ಸುರಕ್ಷಿತವಾಗಿ ಉಳಿಯುವುದಲ್ಲದೆ, ನಿವೃತ್ತಿಯ ನಂತರದ ಪಿಂಚಣಿ (EPS) ಸೌಲಭ್ಯಗಳಿಗೂ ಒಟ್ಟು ಸೇವಾ ಅವಧಿ ಸೇರ್ಪಡೆಯಾಗಿ ಅನುಕೂಲವಾಗುತ್ತದೆ.