ಫ್ರಾನ್ಸ್ನಲ್ಲಿ ಜೀವನ ವೆಚ್ಚ ಏರಿಕೆ ಹಾಗೂ ಶಿಕ್ಷಣ ಕ್ಷೇತ್ರದ ಬಜೆಟ್ ಕಡಿತದ ವಿರುದ್ಧ ಭುಗಿಲೆದ್ದಿರುವ ಸಾರ್ವಜನಿಕ ಪ್ರತಿಭಟನೆಗಳು ಭೀಕರ ಹಿಂಸಾಚಾರಕ್ಕೆ ತಿರುಗಿದ್ದು, ಶನಿವಾರ ಒಂದೇ ದಿನ ದೇಶಾದ್ಯಂತ 1,200 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ 150 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ತಿಳಿಸಿದ್ದಾರೆ. ರಾಜಧಾನಿ ಪ್ಯಾರಿಸ್ ಒಂದರಲ್ಲೇ 855 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಇದು ಸಾರ್ವಕಾಲಿಕ ದಾಖಲೆಯ ಸಂಖ್ಯೆಯಾಗಿದೆ. ಪ್ಯಾರಿಸ್ನ ಉಪ ಮೇಯರ್ ಲಾಮಿಯಾ ಎಲ್ ಆರಾಜೆ ಈ ಕುರಿತು ಪ್ರತಿಕ್ರಿಯಿಸಿ, ನಗರವು ಹಿಂದೆಂದೂ ಕಾಣದ ಮಟ್ಟದ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ತೀವ್ರತೆಗೆ 143 ವರ್ಷಗಳ ಇತಿಹಾಸ ಹೊಂದಿದ್ದ ಲಿಮೋಗೆಸ್ ನಗರದ ಐತಿಹಾಸಿಕ ಪುರಭವನಕ್ಕೆ (Town Hall) ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ದೇಶಾದ್ಯಂತ ಕನಿಷ್ಠ 5.5 ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಪ್ಯಾರಿಸ್ನಲ್ಲಿ 1.10 ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಇಳಿದಿದ್ದರು ಎಂದು ಒಳಾಡಳಿತ ಸಚಿವ ಲಾರೆಂಟ್ ನುನೆಜ್ ತಿಳಿಸಿದ್ದಾರೆ. ಈ ನಡುವೆ ಕೃತ್ಯವನ್ನು ಕಠಿಣವಾಗಿ ಖಂಡಿಸಿರುವ ದೇಶದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮತ್ತು ಲೂಟಿಯಲ್ಲಿ ತೊಡಗಿರುವ 'ಅರಾಜಕತೆ ಸೃಷ್ಟಿಸುವವರ' ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳಿಂದ ಆರಂಭವಾದ ಈ ಚಳವಳಿಗೆ ಈಗ 2018 ರ ಪ್ರಸಿದ್ಧ 'ಯೆಲ್ಲೋ ವೆಸ್ಟ್' (Yellow Vest) ಚಳವಳಿಯ ಮಾಜಿ ನಾಯಕರು ಬೆಂಬಲ ಸೂಚಿಸಿ ಸೇರ್ಪಡೆಗೊಳ್ಳುತ್ತಿರುವುದು ಸರ್ಕಾರದ ಚಿಂತೆಯನ್ನು ಹೆಚ್ಚಿಸಿದೆ. ಕೇವಲ ಫ್ರಾನ್ಸ್ ಮಾತ್ರವಲ್ಲದೆ, ಇಂಧನ ಬೆಲೆ ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ಬೆಲ್ಜಿಯಂ ಹಾಗೂ ಇಟಲಿ ದೇಶಗಳಲ್ಲೂ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಭಾರಿ ಚಕಮಕಿಗಳು ವರದಿಯಾಗಿವೆ.