ಜಾರ್ಖಂಡ್ನ ಬೊಕಾರೊ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ಒಟ್ಟು ನಾಲ್ಕು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇಎಸ್ಎಲ್ ಸ್ಟೀಲ್ ಲಿಮಿಟೆಡ್ (ESL Steel Limited) ಉಕ್ಕು ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದರೆ, ಮತ್ತೊಂದೆಡೆ ವೇಗವಾಗಿ ಬಂದ ಟ್ರಕ್ ಸ್ವೀಟ್ ಅಂಗಡಿಗೆ ನುಗ್ಗಿದ ಪರಿಣಾಮ ಇಬ್ಬರು ಹಿರಿಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಬೊಕಾರೊದಲ್ಲಿರುವ ವೇದಾಂತ ಗ್ರೂಪ್ನ ಅಂಗಸಂಸ್ಥೆಯಾದ ಇಎಸ್ಎಲ್ ಸ್ಟೀಲ್ ಕಾರ್ಖಾನೆಯಲ್ಲಿ ಶಂಕಿತ ವಿಷಕಾರಿ ಅನಿಲ ಸೇವನೆಯಿಂದ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹಾಗೂ ಪಾಲುದಾರ ಸಂಸ್ಥೆಯ ಇಂಜಿನಿಯರ್ ಮೃತಪಟ್ಟಿದ್ದಾರೆ ಎಂದು ಸಂಸ್ಥೆಯ ವಕ್ತಾರರು ದೃಢಪಡಿಸಿದ್ದಾರೆ. ಆದಾಗ್ಯೂ, ಮೃತರ ಗುರುತನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಈ ದುರಂತದ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಲಾಗಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.
ಇದೇ ವೇಳೆ ಬೊಕಾರೊ ಜಿಲ್ಲೆಯ ಪಿಂಡ್ರಾಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೇನ್ ಮೋರೆ ಪ್ರದೇಶದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ನಿಯಂತ್ರಣ ತಪ್ಪಿದ ವೇಗದ ಟ್ರೈಲರ್ ಟ್ರಕ್ ವೊಂದು ರಸ್ತೆಬದಿಯ ಸ್ವೀಟ್ ಅಂಗಡಿಗೆ ನೇರವಾಗಿ ನುಗ್ಗಿದೆ. ಈ ಪರಿಣಾಮ ಅಂಗಡಿಯಲ್ಲಿದ್ದ 65 ಹಾಗೂ 70 ವರ್ಷ ವಯಸ್ಸಿನ ಇಬ್ಬರು ವೃದ್ಧರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಾಹನವನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.