ಬರ್ಲಿನ್ / ಬೋಚುಮ್: ಪಶ್ಚಿಮ ಜರ್ಮನಿಯ ಬೋಚುಮ್ ನಗರದ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೂವರು ಭಾರತೀಯ ಪ್ರಜೆಗಳು ಸಜೀವ ದಹನಗೊಂಡಿದ್ದಾರೆ.
ಮಂಗಳವಾರ ಮುಂಜಾನೆ ನಡೆದ ಈ ದುರಂತದಲ್ಲಿ ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಆಕಸ್ಮಿಕ ಅಗ್ನಿ ಅವಘಡವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಹಚ್ಚಲಾದ ಬೆಂಕಿ (Arson) ಎಂಬ ಶಂಕೆಯ ವ್ಯಕ್ತವಾಗಿದ್ದು, ಅದೇ ಕಟ್ಟಡದಲ್ಲಿ ವಾಸವಿದ್ದ 41 ವರ್ಷದ ರೊಮೇನಿಯಾ ಮೂಲದ ಪ್ರಜೆಯನ್ನು ಪೊಲೀಸರು ಕೊಲೆ ಶಂಕೆಯ ಮೇಲೆ ಬಂಧಿಸಿದ್ದಾರೆ.
ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆ ಡಬ್ಲ್ಯುಡಿಆರ್ (WDR) ಮತ್ತು ಜರ್ಮನ್ ಪ್ರೆಸ್ ಏಜೆನ್ಸಿ (DPA) ವರದಿಗಳ ಪ್ರಕಾರ, ಮೃತಪಟ್ಟವರನ್ನು 25 ಮತ್ತು 27 ವರ್ಷದ ಇಬ್ಬರು ಯುವತಿಯರು ಹಾಗೂ 26 ವರ್ಷದ ಯುವಕ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಭಾರತೀಯ ಮೂಲದವರಾಗಿದ್ದಾರೆ. ಮೃತರ ಹೆಸರು ಹಾಗೂ ಭಾರತದ ಯಾವ ರಾಜ್ಯದವರು ಎಂಬ ವಿವರಗಳನ್ನು ಪೊಲೀಸರು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಮುಂಜಾನೆ ಹೊತ್ತಿ ಉರಿದ ಅಪಾರ್ಟ್‌ಮೆಂಟ್
ಬೋಚುಮ್ ನಗರದ ಹಾಫ್‌ಸ್ಟೆಡ್ (Hofstede) ಪ್ರದೇಶದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಮಂಗಳವಾರ ಮುಂಜಾನೆ ಸ್ಥಳೀಯ ಕಾಲಮಾನ ಸುಮಾರು 4:15 ರ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳಿಗೆ ವ್ಯಾಪಿಸಿದ ಕಾರಣ, ಮೇಲಿನ ಮಹಡಿಗಳಲ್ಲಿದ್ದ ನಿವಾಸಿಗಳು ಹೊರಬರಲಾರದೆ ಸಿಲುಕಿಕೊಂಡರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಏಣಿಗಳು ಹಾಗೂ ಸುರಕ್ಷತಾ ಕುಷನ್‌ಗಳನ್ನು ಬಳಸಿ ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಹೊಗೆ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಎರಡನೇ ಮಹಡಿಯಲ್ಲಿ ಪತ್ತೆಯಾದ ಶವಗಳು
ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಅಗ್ನಿಶಾಮಕ ಸಿಬ್ಬಂದಿ ಎರಡನೇ ಮಹಡಿಯ ಫ್ಲಾಟ್ ಅನ್ನು ಪರಿಶೀಲಿಸಿದಾಗ, ಮೂವರು ಭಾರತೀಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಸ್ಥಳದಲ್ಲೇ ಅವರಿಗೆ ತುರ್ತು ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಉಸಿರುಗಟ್ಟಿ ಹಾಗೂ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಈ ಮೂವರು ಭಾರತೀಯರು ಕೇವಲ ಎರಡು ವಾರಗಳ ಹಿಂದಷ್ಟೇ ಈ ಫ್ಲಾಟ್‌ಗೆ ಬಾಡಿಗೆಗೆ ಬಂದಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ತಾಂತ್ರಿಕ ದೋಷವಿಲ್ಲ: ಕೊಲೆ ಶಂಕೆಯಲ್ಲಿ ತನಿಖೆ
ಘಟನಾ ಸ್ಥಳವನ್ನು ಪರಿಶೀಲಿಸಿದ ತನಿಖಾಧಿಕಾರಿಗಳು, ಈ ದುರಂತಕ್ಕೆ ಯಾವುದೇ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಅದೇ ಕಟ್ಟಡದಲ್ಲಿ ವಾಸವಿದ್ದ 41 ವರ್ಷದ ರೊಮೇನಿಯನ್ ವ್ಯಕ್ತಿಯನ್ನು ಕೊಲೆ ತಂಡ (Homicide Squad) ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ದುರಂತ ಸಂಭವಿಸುವ ಹಿಂದಿನ ದಿನವೂ ಇದೇ ಕಟ್ಟಡದಲ್ಲಿ ಗಲಾಟೆ ನಡೆದು ಪೊಲೀಸರು ಭೇಟಿ ನೀಡಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆ ಜಗಳಕ್ಕೂ ಈ ಅಗ್ನಿ ದುರಂತಕ್ಕೂ ಏನಾದರೂ ಸಂಬಂಧವಿದೆಯೇ ಹಾಗೂ ಕೃತ್ಯದ ಹಿಂದಿನ ನಿಖರ ಉದ್ದೇಶವೇನು ಎಂಬ ಕುರಿತು ಜರ್ಮನ್ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ