ಚಿನ್ನ–ಬೆಳ್ಳಿ ದರ ಗಗನಕ್ಕೆ: ಬೀದರ್ನಲ್ಲಿ ಖರೀದಿಗೆ ಜನ ಹಿಂದೇಟು
ದರ ಏರಿಕೆಯ ನೇರ ಹೊಡೆತ ಕುಶಲ ಕರ್ಮಿಗಳಿಗೆ – ಕೆಲಸವಿಲ್ಲದೆ ಸಂಕಷ್ಟ
ಬೀದರ್: ಚಿನ್ನ ಮತ್ತು ಬೆಳ್ಳಿಯ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದರಿಂದ, ಆಭರಣ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನದ ವ್ಯಾಪಾರವನ್ನೇ ಜೀವನಾಧಾರ ಮಾಡಿಕೊಂಡಿರುವ ಕುಶಲ ಕರ್ಮಿಗಳು ಇದೀಗ ಕೆಲಸವಿಲ್ಲದೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದರ ಏರಿಕೆಯಿಂದ ವ್ಯಾಪಾರವೇ ಸ್ಥಗಿತಗೊಂಡಂತಾಗಿದ್ದು, ವಿಶೇಷವಾಗಿ ಜಿಲ್ಲಾ, ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಚಿನ್ನ–ಬೆಳ್ಳಿಯ ಕುಶಲ ಕರ್ಮಿಗಳ ಬದುಕು ಅಸ್ತವ್ಯಸ್ತವಾಗಿದೆ.
ಸದ್ಯ ಒಂದು ತೊಲ ಚಿನ್ನದ ದರ ರೂ. 1.86 ಲಕ್ಷ ತಲುಪಿದ್ದು, ಬೆಳ್ಳಿಯ ದರ ಕಿಲೋಗೆ ರೂ. 3,82,000ರಷ್ಟಾಗಿದೆ. ಈ ಅತಿಯಾದ ದರ ಏರಿಕೆಯಿಂದ ಚಿನ್ನ–ಬೆಳ್ಳಿ ಆಭರಣಗಳ ಖರೀದಿ ಗಣನೀಯವಾಗಿ ಕುಸಿದಿದೆ. ಮದುವೆಯಂತಹ ಅನಿವಾರ್ಯ ಕಾರ್ಯಕ್ರಮಗಳಿಗೆ ಮಾತ್ರ ಜನ ಕಡಿಮೆ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದು, ಹೂಡಿಕೆ ಅಥವಾ ಮನೆ ಬಳಕೆಗೆ ಚಿನ್ನ ಖರೀದಿಸುವ ಪ್ರವೃತ್ತಿ ಬಹುತೇಕ ನಿಂತಂತಾಗಿದೆ.
ಅನಿವಾರ್ಯ ಆಭರಣಗಳಿಗೆ ಮಾತ್ರ ಸೀಮಿತ ಖರೀದಿ
ಈಗ ಮದುವೆ ಸಂದರ್ಭಗಳಲ್ಲಿ ತಾಳಿ, ಕಾಲುಂಗುರ, ಗುಂಡಾ, ಹಾಗಲಕಾಯಿ ಮುಂತಾದ ಕೆಲವೇ ಆಭರಣಗಳನ್ನು ಅಲ್ಪ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಹಿಂದೆ ಲಕ್ಷ್ಮೀಹಾರ, ತಾಳಿ ಚೈನ್ (ಘಂಟನ್), ಪಾಟ್ಲಿ, ಉಂಗುರುಗಳು, ನೆಕ್ಲೇಸ್ ಹಾರ, ಕೊರಳ ಚೈನ್, ನಿಶ್ಚಿತಾರ್ಥದ ಉಂಗುರು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ ನಡೆಯುತ್ತಿತ್ತು. ಆದರೆ ದರ ಏರಿಕೆಯ ಪರಿಣಾಮವಾಗಿ ಈಗ ಈ ಆಭರಣಗಳ ಖರೀದಿ ಬಹುತೇಕ ಕಡಿಮೆಯಾಗಿದೆ.
350ಕ್ಕೂ ಅಧಿಕ ಮಳಿಗೆಗಳು – ಕೆಲಸವಿಲ್ಲದ ಕಾರ್ಮಿಕರು
ಬೀದರ್ ನಗರದಲ್ಲಿ 350ಕ್ಕೂ ಅಧಿಕ ಚಿನ್ನದ ಮಳಿಗೆಗಳಿದ್ದು, ಅವುಗಳಲ್ಲಿ ಕೆಲಸ ಮಾಡುವ ಅನೇಕ ಕುಶಲ ಕರ್ಮಿಗಳು ಇದೀಗ ಅನ್ಯ ಕೆಲಸ ಹುಡುಕುವಂತಾಗಿದೆ. ಈಚೆಗೆ ಜನ ದೊಡ್ಡ ದೊಡ್ಡ ಜ್ಯುವೆಲ್ಲರಿ ಶೋರೂಮ್‌ಗಳಲ್ಲಿ ಮಾತ್ರ ಚಿನ್ನ ಖರೀದಿಸುತ್ತಿರುವುದರಿಂದ ಸಣ್ಣ ಮಳಿಗೆಗಳಿಗೆ ಮೊದಲೇ ಹೊಡೆತ ಬಿದ್ದಿತ್ತು. ಈಗ ದರ ಏರಿಕೆಯಿಂದಾಗಿ ಈ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ.
“ಮೊದಲು ಜನ ಹೆಚ್ಚು ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದರು. ಈಗ ಖರೀದಿ ಇಲ್ಲದಂತಾಗಿದೆ. ಕೆಲಸವಿಲ್ಲದೆ ಮನೆ ನಡೆಸುವುದೇ ಕಷ್ಟವಾಗಿದೆ” ಎಂದು ಬೀದರ್ ಸರಾಫ್ ಬಜಾರ್‌ನ ಕೆವಿ ಜ್ಯೂಯಲ್ಲರ್ಸ್ನ ಸಚಿನ್ ವಿಶ್ವಕರ್ಮ ಆತಂಕ ವ್ಯಕ್ತಪಡಿಸಿದರು.
ಗಂಟೆಗೊಮ್ಮೆ ದರ ಬದಲಾವಣೆ – ನಷ್ಟದ ವ್ಯವಹಾರ
ಚಿನ್ನದ ದರ ಗಂಟೆಗೊಮ್ಮೆ ಬದಲಾಗುತ್ತಿರುವುದು ಕುಶಲ ಕರ್ಮಿಗಳಿಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.
“ನಾವು ಒಂದು ತೊಲೆಗೆ 1.86 ಲಕ್ಷ ರೂ. ದರದಲ್ಲಿ ಆಭರಣ ಮಾಡಲು ಆರ್ಡರ್ ಪಡೆದರೆ, ಮತ್ತೊಂದು ಗಂಟೆಯಲ್ಲಿ ದರ ಏರಿಕೆಯಾಗುತ್ತದೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಪದೇಪದೇ ದರ ಏರಿಕೆಯಿಂದ ಜನ ಖರೀದಿಗೂ ಬರುತ್ತಿಲ್ಲ” ಎಂದು ಶ್ರೀ ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರರ ಸಂಘದ ಕಾರ್ಯದರ್ಶಿ ರವಿ ಬಿರಾದಾರ್ ಹೇಳಿದರು.
ಅದೇ ಸಂಘದ ಅಧ್ಯಕ್ಷ ಸುನಿಲ್ ಮೊಟ್ಟೆ ಮಾತನಾಡಿ, “ಚಿನ್ನ–ಬೆಳ್ಳಿ ದರ ನಿತ್ಯ ಏರಿಕೆಯಿಂದ ನಮ್ಮ ವ್ಯಾಪಾರ ಸಂಪೂರ್ಣ ಕುಸಿದಿದೆ. ಕುಶಲ ಕರ್ಮಿಗಳಿಗೆ ಮೊದಲಿನಂತೆ ಕೆಲಸ ಇಲ್ಲ. ದೈನಂದಿನ ಬದುಕು ನಡೆಸುವುದೇ ಕಷ್ಟವಾಗಿದೆ. ದರ ಇಳಿಯುತ್ತದೋ ಇಲ್ಲವೋ ಗೊತ್ತಿಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕು” ಎಂದು ಮನವಿ ಮಾಡಿದರು.
ಸಾಮಾನ್ಯ ಜನರಿಗೂ ಹೊರೆ
ದರ ಏರಿಕೆಯ ಹೊರೆ ಸಾಮಾನ್ಯ ಜನರ ಮೇಲೂ ಬೀಳುತ್ತಿದೆ.
“ಮೊದಲು ಒಂದು ಜೋಡಿ ಕಾಲುಂಗುರ ಮಾಡಿಸಲು 400–500 ರೂ. ಸಾಕಾಗುತ್ತಿತ್ತು. ಈಗ ಅದಕ್ಕೆ 4 ಸಾವಿರ ರೂ. ಬೇಕಾಗಿದೆ. ಕೂಲಿ ಕೆಲಸ ಮಾಡುವ ನಮಗೆ ಕಾಲುಂಗುರ ಮಾಡಿಸಲೂ ಯೋಚಿಸಬೇಕಾದ ಸ್ಥಿತಿ ಬಂದಿದೆ. ಚಿನ್ನ ಖರೀದಿಯಂತೂ ಸದ್ಯಕ್ಕೆ ಸಾಧ್ಯವೇ ಇಲ್ಲ” ಎಂದು ಮೀನಕೇರಾ ಗ್ರಾಮದ ಮಹಿಳೆ ನಿರ್ಮಲಾ ತಮ್ಮ ನೋವು ಹಂಚಿಕೊಂಡರು.
ಒಟ್ಟಾರೆ ಸ್ಥಿತಿ
ಒಟ್ಟಾರೆ, ಚಿನ್ನ–ಬೆಳ್ಳಿ ದರ ಏರಿಕೆ ವ್ಯಾಪಾರಿಗಳನ್ನು ಮಾತ್ರವಲ್ಲದೆ, ಕುಶಲ ಕರ್ಮಿಗಳು ಮತ್ತು ಸಾಮಾನ್ಯ ಜನರ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ದರ ಇಳಿಕೆ ಅಥವಾ ಸರ್ಕಾರದ ನೆರವು ದೊರಕದಿದ್ದರೆ, ಸಾಂಪ್ರದಾಯಿಕ ಚಿನ್ನದ ವೃತ್ತಿಯೇ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.