ಹುಬ್ಬಳ್ಳಿ: ಕರ್ನಾಟಕ ಸರ್ಕಾರದ ಪ್ರತಿಷ್ಠಿತ 'ಯುವನಿಧಿ' ಯೋಜನೆಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ 'ಯುವನಿಧಿ ಪ್ಲಸ್' ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC) ಉಚಿತ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದ್ದು, ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಆಕೌಂಟ್ಸ್ ಎಕ್ಸಿಕ್ಯೂಟಿವ್, ಡಿಜಿಟಲ್ ಮಾರ್ಕೆಟಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್, ಸ್ಯಾಪ್ (SAP), ಐಓಟಿ (IoT), ಪಿಎಲ್‌ಸಿ (PLC) ಪ್ರೋಗ್ರಾಮಿಂಗ್, ಕ್ಯಾಡ್-ಕ್ಯಾಮ್ (CAD-CAM) ಹಾಗೂ ಸಿಎನ್‌ಸಿ (CNC) ಯಂತಹ ವಿವಿಧ ಉದಯೋನ್ಮುಖ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸ್ಥಳೀಯವಾಗಿಯೇ ಉತ್ತಮ ವೇತನದೊಂದಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲಾಗುವುದು.
ಉಚಿತ ಕೌಶಲ್ಯ ತರಬೇತಿಯು ಅಕ್ಟೋಬರ್ 05 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವನಿಧಿ ಫಲಾನುಭವಿಗಳು ಅಕ್ಟೋಬರ್ 3ರೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC), ಇಂಡಸ್ಟ್ರಿಯಲ್ ಎಸ್ಟೇಟ್, ಗೋಕುಲ ರಸ್ತೆ, ಹುಬ್ಬಳ್ಳಿ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 0836-2333159, 8123719773 ಅನ್ನು ಸಂಪರ್ಕಿಸಬಹುದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಮಾರುತಿ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.