ಗುರುಮಠಕಲ್ ದನಗಳ ಸಂತೆ ದುಸ್ಥಿತಿ: ಜನಪ್ರತಿನಿಧಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಯಿತೇ?
ಸಾಮಾಜಿಕ ಹೋರಾಟಗಾರನ ಎಚ್ಚರಿಕೆಗೆ ಎಚ್ಚೆತ್ತ ಆಡಳಿತ!
ಗುರುಮಠಕಲ್, ಜುಲೈ, 21: ಕ್ಷೇತ್ರದ ಪ್ರಮುಖ ಜಾನುವಾರು ಮಾರುಕಟ್ಟೆಯಾದ ಗುರುಮಠಕಲ್ ಎಪಿಎಂಸಿ ದನಗಳ ಸಂತೆಯಲ್ಲಿ ವರ್ಷಗಳಿಂದ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದಿದ್ದರೂ, ಅದನ್ನು ಸರಿಪಡಿಸುವಲ್ಲಿ ಜನಪ್ರತಿನಿಧಿಯ ಪರಿಣಾಮಕಾರಿ ಹಸ್ತಕ್ಷೇಪ ಕಾಣಿಸದಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕುಡಿಯುವ ನೀರು, ನೆರಳು, ಪಶುವೈದ್ಯರ ಸೇವೆ, ಸ್ವಚ್ಛತೆ ಸೇರಿದಂತೆ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವ ಸಮಸ್ಯೆ ಬಗ್ಗೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ವಚ್ಛತಾ ಕಾರ್ಯ ಆರಂಭಿಸಿರುವುದು, "ಜನಪ್ರತಿನಿಧಿಗಳ ನಿರಂತರ ಮೇಲ್ವಿಚಾರಣೆ ಎಲ್ಲಿತ್ತು?" ಎಂಬ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ತೀವ್ರಗೊಳಿಸಿದೆ.
ಪ್ರತಿ ಸೋಮವಾರ ಸಾವಿರಾರು ರೈತರು ಹಾಗೂ ನೂರಾರು ಜಾನುವಾರುಗಳು ಸೇರುವ ಈ ದನಗಳ ಸಂತೆ ಗುರುಮಠಕಲ್ ಭಾಗದ ಕೃಷಿ ಆರ್ಥಿಕತೆಯ ಜೀವನಾಡಿಯಾಗಿದೆ. ಇಂತಹ ಪ್ರಮುಖ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ನೆರಳಿನ ಶೆಡ್, ಪಶುವೈದ್ಯರ ಸೇವೆ, ಸ್ವಚ್ಛತೆ, ಶೌಚಾಲಯ, ವಿದ್ಯುತ್ ದೀಪ, ಸಿಸಿ ಕ್ಯಾಮೆರಾ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ; ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿರಂತರ ಕಾಳಜಿ ಮತ್ತು ಮೇಲ್ವಿಚಾರಣೆಯ ಕೊರತೆಯನ್ನು ಪ್ರತಿಬಿಂಬಿಸುವ ಬೆಳವಣಿಗೆಯಾಗಿದೆ ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.
ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸಂತೆಗೆ ಭೇಟಿ ನೀಡಿ ಅಲ್ಲಿನ ದುಸ್ಥಿತಿಯನ್ನು ಬಹಿರಂಗಪಡಿಸಿ, ಹೋರಾಟದ ಎಚ್ಚರಿಕೆ ನೀಡುತ್ತಿದ್ದಂತೆಯೇ ಪುರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳು ಜೆಸಿಬಿ, ಟ್ರ್ಯಾಕ್ಟರ್ ಮತ್ತು ಕಾರ್ಮಿಕರೊಂದಿಗೆ ಸ್ಥಳಕ್ಕಾಗಮಿಸಿ ಸ್ವಚ್ಛತಾ ಕಾರ್ಯ ಆರಂಭಿಸಿದರು. ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಇಷ್ಟು ದಿನ ಈ ಸಮಸ್ಯೆಗಳು ಯಾರ ಗಮನಕ್ಕೂ ಬರಲಿಲ್ಲವೇ? ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಜನಪ್ರತಿನಿಧಿಯ ಕೆಲಸ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಜನರು ಎದುರಿಸುವ ಸಮಸ್ಯೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುವುದು, ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು, ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವುದು ಹಾಗೂ ಸಾರ್ವಜನಿಕ ಸಂಸ್ಥೆಗಳ ಕಾರ್ಯಕ್ಷಮತೆಯ ಮೇಲೆ ನಿಗಾ ಇಡುವುದು ಅವರ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ಕ್ಷೇತ್ರದ ಪ್ರಮುಖ ಮಾರುಕಟ್ಟೆಯೇ ಈ ದುಸ್ಥಿತಿಯಲ್ಲಿದ್ದರೆ, ಜನರು ತಮ್ಮ ಪ್ರತಿನಿಧಿಯಿಂದ ನಿರೀಕ್ಷಿಸಿದ್ದ ಆಡಳಿತಾತ್ಮಕ ನಾಯಕತ್ವ ಎಲ್ಲಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ರೈತರಿಂದ ಶುಲ್ಕ ವಸೂಲಿ ಮಾಡುವ ಎಪಿಎಂಸಿ, ಅದಕ್ಕೆ ತಕ್ಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪಶುವೈದ್ಯರ ನಿಯೋಜನೆ, ರ್ಯಾಂಪ್, ಬಾಂಡ್ ಕಲ್ಲುಗಳು, ಲಾರಿಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳ, ವಿದ್ಯುತ್ ದೀಪಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಕಲ್ಪಿಸುವುದು ಯಾವುದೇ ವಿಶೇಷ ಬೇಡಿಕೆಯಲ್ಲ; ಅದು ರೈತರ ಹಕ್ಕು ಮತ್ತು ಆಡಳಿತದ ಜವಾಬ್ದಾರಿಯಾಗಿದೆ.
ಸಾಮಾಜಿಕ ಹೋರಾಟಗಾರನ ಎಚ್ಚರಿಕೆಯ ನಂತರವೇ ಅಧಿಕಾರಿಗಳು ಚುರುಕಾಗಿರುವುದು ಒಂದು ಸಕಾರಾತ್ಮಕ ಬೆಳವಣಿಗೆಯಾದರೂ, ಪ್ರತಿ ಸಮಸ್ಯೆಗೂ ಹೋರಾಟವೇ ಪರಿಹಾರವಾಗಬೇಕಾದರೆ ಜನಪ್ರತಿನಿಧಿತ್ವದ ಉದ್ದೇಶವೇನು? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದು ನಾಗರಿಕರ ಹಕ್ಕು; ಆದರೆ ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸುವ ವ್ಯವಸ್ಥೆ ರೂಪಿಸುವುದು ಜನಪ್ರತಿನಿಧಿಗಳ ಹೊಣೆಗಾರಿಕೆಯ ಭಾಗವಾಗಿದೆ.
ಈಗ ಆರಂಭವಾಗಿರುವ ಸ್ವಚ್ಛತಾ ಕಾರ್ಯ ಶಾಶ್ವತ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕಿದೆ. ಕೇವಲ ತಾತ್ಕಾಲಿಕ ಸ್ವಚ್ಛತಾ ಕಾರ್ಯದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ದನಗಳ ಸಂತೆಯನ್ನು ಮಾದರಿ ಜಾನುವಾರು ಮಾರುಕಟ್ಟೆಯಾಗಿ ರೂಪಿಸಲು ಸಮಗ್ರ ಅಭಿವೃದ್ಧಿ ಯೋಜನೆ, ನಿರಂತರ ನಿರ್ವಹಣೆ ಹಾಗೂ ಜನಪ್ರತಿನಿಧಿಗಳ ಸಕ್ರಿಯ ಮೇಲ್ವಿಚಾರಣೆ ಅಗತ್ಯವಾಗಿದೆ.
"ಹೋರಾಟದ ಎಚ್ಚರಿಕೆ ಬಂದಾಗ ಮಾತ್ರ ಆಡಳಿತ ಎಚ್ಚೆತ್ತುಕೊಳ್ಳಬಾರದು; ಜನರ ಸಮಸ್ಯೆ ಕೇಳುವ ಮುನ್ನವೇ ಸ್ಪಂದಿಸುವ ಆಡಳಿತ ಮತ್ತು ಅದಕ್ಕೆ ದಿಕ್ಕು ತೋರಿಸುವ ಜನಪ್ರತಿನಿಧಿತ್ವವೇ ಪ್ರಜಾಪ್ರಭುತ್ವದ ನಿಜವಾದ ಯಶಸ್ಸು" ಎಂಬುದು ಗುರಮಠಕಲ್ ದನಗಳ ಸಂತೆಯ ಪ್ರಸಂಗ ಮತ್ತೊಮ್ಮೆ ನೆನಪಿಸುತ್ತಿದೆ.
ಈ ನಂಬರ್ ಸೇವ್ ಮಾಡಿಕೊಳ್ಳಿ. ಆಡಳಿತಗಾರರ ಅಪಸವ್ಯದ ಯಾವುದೇ ಮಾಹಿತಿಯನ್ನು ಜನ ಆಕ್ರೋಶದೊಂದಿಗೆ ಹಂಚಿಕೊಳ್ಳಿ. 9845968164