ನವದೆಹಲಿ: ಭಾರತದ ಅತಿದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರ ಗೌಪ್ಯ ಮಾಹಿತಿ ಸೋರಿಕೆಯಾಗಿದೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ಡಾರ್ಕ್ ವೆಬ್ನಲ್ಲಿ ಎಸ್ಬಿಐ ಗ್ರಾಹಕರ ಡೇಟಾ ಪತ್ತೆಯಾದ ಬೆನ್ನಲ್ಲೇ ದೇಶಾದ್ಯಂತ ಸೈಬರ್ ಅಭದ್ರತೆಯ ಆತಂಕ ವ್ಯಕ್ತವಾಗಿದೆ. ಆದರೆ, ಗ್ರಾಹಕರ ಖಾತೆಗಳಲ್ಲಿರುವ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದೆ.
ಮಾಹಿತಿ ಸೋರಿಕೆಯಿಂದ ಪ್ರಭಾವಿತರಾಗಿರುವ ಗ್ರಾಹಕರಿಗೆ ಬ್ಯಾಂಕ್ ಇಮೇಲ್ ಮತ್ತು ವಾಟ್ಸಾಪ್ ಮೂಲಕ ವೈಯಕ್ತಿಕವಾಗಿ ಮಾಹಿತಿ ತಲುಪಿಸುತ್ತಿದ್ದು, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚನೆ ನೀಡಿದೆ.
ಡಾರ್ಕ್ ವೆಬ್ನಲ್ಲಿ 3,897 ಗ್ರಾಹಕರ ವಿವರ ಪ್ರಕಟ
ಡಾರ್ಕ್ ವೆಬ್ನಲ್ಲಿ ಪತ್ತೆಯಾಗಿದ್ದ ಸುಮಾರು 3.75 ಲಕ್ಷ ರೆಕಾರ್ಡ್ಗಳ ಪೈಕಿ ಎಸ್ಬಿಐ ತನಿಖಾ ತಂಡ ಆರಂಭಿಕ ಪರಿಶೀಲನೆ ನಡೆಸಿದೆ. ಈ ವೇಳೆ ಸುಮಾರು 3,897 ದಾಖಲೆಗಳಲ್ಲಿ ಗ್ರಾಹಕರ ಗುರುತಿಗೆ ಸಂಬಂಧಿಸಿದ ನೈಜ ವಿವರಗಳು ಪತ್ತೆಯಾಗಿವೆ. ದೇಶದ ರಕ್ಷಣಾ ಸೈಬರ್ ಏಜೆನ್ಸಿ (Defence Cyber Agency), ಥ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ ಪ್ರೊವೈಡರ್ ಹಾಗೂ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ನೀಡಿರುವ ಎಚ್ಚರಿಕೆಯ ಆಧರಿಸಿ ಎಸ್ಬಿಐ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಸಂಭವನೀಯ ಸೈಬರ್ ದಾಳಿಯ ಕುರಿತು ತನಿಖೆ ನಡೆಸಲು ಸೈಬರ್ ಭದ್ರತಾ ತಜ್ಞರ ತಂಡವನ್ನು ನೇಮಿಸಿದೆ.
ಗ್ರಾಹಕರ ಯಾವೆಲ್ಲ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ?
ಡಾರ್ಕ್ ವೆಬ್ನಲ್ಲಿ ಬಹಿರಂಗವಾಗಿರುವ ದಾಖಲೆಗಳಲ್ಲಿ ಗ್ರಾಹಕರ ಹಲವು ವೈಯಕ್ತಿಕ ವಿವರಗಳಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮುಖ್ಯವಾಗಿ ಗ್ರಾಹಕರ ಹೆಸರುಗಳು, ನೋಂದಾಯಿತ ಮೊಬೈಲ್ ಸಂಖ್ಯೆಗಳು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸಗಳು, ಗೃಹ ವಿಳಾಸ ಹಾಗೂ ಲಿಂಗಕ್ಕೆ ಸಂಬಂಧಿಸಿದ ವಿವರಗಳು ಸೋರಿಕೆಯಾಗಿವೆ. ಇದರ ಜೊತೆಗೆ ಬ್ಯಾಂಕ್ ಶಾಖೆಯ ವಿವರಗಳು, ಕಸ್ಟಮರ್ ಐಡಿ (CIF) ಹಾಗೂ ಗ್ರಾಹಕರು ಪಡೆದಿರುವ ಸಾಲ ಮತ್ತು ಲೀಡ್ ರೆಕಾರ್ಡ್ಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಸಹ ಲೀಕ್ ಆಗಿರುವ ಶಂಕೆ ವ್ಯಕ್ತವಾಗಿದೆ.
‘ನಿಮ್ಮ ಹಣ ಸಂಪೂರ್ಣ ಸುರಕ್ಷಿತ’: ಎಸ್ಬಿಐ ಅಧಿಕೃತ ಸ್ಪಷ್ಟನೆ
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣ 'X' ನಲ್ಲಿ (ಟ್ವಿಟರ್) ಸ್ಪಷ್ಟನೆ ನೀಡಿರುವ ಎಸ್ಬಿಐ, ಸೈಬರ್ ಭದ್ರತಾ ಲೋಪದಿಂದ ಮಾಹಿತಿ ಸೋರಿಕೆಯಾಗಿರಬಹುದಾದ ಪ್ರತಿಯೊಬ್ಬ ಗ್ರಾಹಕರಿಗೂ ಬ್ಯಾಂಕ್ ವೈಯಕ್ತಿಕವಾಗಿ ಸಂದೇಶ ಕಳುಹಿಸಿ ಮಾಹಿತಿ ನೀಡಿದೆ ಎಂದು ತಿಳಿಸಿದೆ. ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತು ಠೇವಣಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಈ ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ನ ಕೋರ್ ಬ್ಯಾಂಕಿಂಗ್ ಕಾರ್ಯಾಚರಣೆ, ಹಣಕಾಸು ಕಾರ್ಯಕ್ಷಮತೆ ಅಥವಾ ದೈನಂದಿನ ವ್ಯವಹಾರಗಳ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದೆ.
ಗ್ರಾಹಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಯಾವುದೇ ಕಾರಣಕ್ಕೂ ಒಟಿಪಿ (OTP), ಪಿನ್ (PIN) ಅಥವಾ ಪಾಸ್ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಬ್ಯಾಂಕ್ ಮನವಿ ಮಾಡಿದೆ. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಬರುವ ಅಪರಿಚಿತ ಕರೆಗಳು, ಸಂದೇಶಗಳು ಹಾಗೂ ಸಂಶಯಾಸ್ಪದ ಇಮೇಲ್ಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಯಾವುದೇ ಅನಧಿಕೃತ ಲಿಂಕ್ಗಳ ಮೇಲೆ ಕ್ಲಿಕ್ ಮಾಡದೆ, ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡಿದೆ.