ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆ (ಎಐ) ನೀಡುವ ವರದಿಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದು ಅಥವಾ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದನ್ನು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಸೆಂಪೂರ್ಣವಾಗಿ ನಿಷೇಧಿಸಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಂತಹ ಕಟ್ಟುನಿಟ್ಟಿನ ಹಾಗೂ ಐತಿಹಾಸಿಕ ಕಾನೂನನ್ನು ಜಾರಿಗೆ ತಂದ ಅಮೆರಿಕದ ಅತ್ಯಂತ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕ್ಯಾಲಿಫೋರ್ನಿಯಾ ಪಾತ್ರವಾಗಿದೆ.
ಹೊಸ ಕಾನೂನಿನ ಪ್ರಕಾರ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವಾಗ ಕೇವಲ ಯಂತ್ರಗಳ ಅಥವಾ ತಂತ್ರಜ್ಞಾನದ ನಿರ್ಧಾರವೇ ಅಂತಿಮವಾಗಬಾರದು. ಎಐ ನೀಡುವ ಶಿಫಾರಸು ಅಥವಾ ವರದಿಗಳನ್ನು ಸಂಸ್ಥೆಯ ಮಾನವ ಅಧಿಕಾರಿಗಳು ಕಡ್ಡಾಯವಾಗಿ ಪುನರ್ ಪರಿಶೀಲನೆ ಮಾಡಲೇಬೇಕು. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಮ್ಯಾನೇಜರ್ಗಳ ಮೌಲ್ಯಮಾಪನ ಮತ್ತು ಸಿಬ್ಬಂದಿಯ ಇತರ ಸೇವಾ ದಾಖಲೆಗಳನ್ನು ಪರಿಗಣಿಸುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲಾಗಿದೆ.
"ಕೃತಕ ಬುದ್ಧಿಮತ್ತೆಯು ಮಾನವರನ್ನು ನಿಯಂತ್ರಿಸಬಾರದು, ಬದಲಿಗೆ ಮಾನವರೇ ಎಐ ಅನ್ನು ನಿಯಂತ್ರಿಸಬೇಕು. ಯಾವುದೇ ಯಂತ್ರ ಅಥವಾ ಎಐ ತಂತ್ರಜ್ಞಾನವು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವ ಅಂತಿಮ ನಿರ್ಧಾರ ತೆಗೆದುಕೊಳ್ಳಬಾರದು" ಎಂದು ಈ ಮಸೂದೆಯ ಲೇಖಕರಾದ ಜೆರ್ರಿ ಮೆಕ್ನರ್ನಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಉದ್ಯೋಗಿಯ ವಿರುದ್ಧದ ಶಿಸ್ತುಕ್ರಮಕ್ಕೆ ಎಐ ಬಳಸಿದ್ದರೆ, ಆ ಕುರಿತು ಉದ್ಯೋಗಿಗೆ ಕಡ್ಡಾಯವಾಗಿ ಲಿಖಿತ ಮಾಹಿತಿ ನೀಡಬೇಕು ಹಾಗೂ ತನ್ನ ವಿವರಣೆ ನೀಡಲು ಮಾನವ ಅಧಿಕಾರಿಯೊಬ್ಬರನ್ನು ಸಂಪರ್ಕಿಸಲು ಉದ್ಯೋಗಿಗೆ ಅವಕಾಶ ಕಲ್ಪಿಸುವುದು ಈ ಹೊಸ ನಿಯಮದ ಪ್ರಮುಖ ಅಂಶವಾಗಿದೆ.