ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಕಿಂಗ್ ಖಾಲೀದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಗುರುವಾರ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಮೂವರು ಸೌದಿ ನಾಗೃತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಸಾಮಾನ್ಯ ಪ್ರಾಧಿಕಾರ (GACA) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆಯಲ್ಲಿ ತಮ್ಮ ಸಂಸ್ಥೆಯ ಒಬ್ಬ ಉದ್ಯೋಗಿ ಸಾವನ್ನಪ್ಪಿರುವುದನ್ನು ಸೌದಿ ಏರ್ಲೈನ್ಸ್ ಕೂಡ ದೃಢಪಡಿಸಿದೆ.
ವಿಮಾನ ನಿಲ್ದಾಣದ ಸೌಲಭ್ಯಗಳ ಮೇಲೆ ಮೊದಲ ದಾಳಿ ನಡೆದರೆ, ಎರಡನೇ ದಾಳಿಯು ಸೌದಿ ವಿಮಾನವೊಂದನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಯಿಂದ ವಿಮಾನ ನಿಲ್ದಾಣದ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದು, ವಿವಿಧ ರಾಷ್ಟ್ರಗಳ ಸೌದಿ ನಾಗರಿಕರು ಹಾಗೂ ನಿವಾಸಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ತುರ್ತು ಸ್ಪಂದನಾ ತಂಡಗಳು ತಕ್ಷಣ ಕಾರ್ಯಪ್ರವೃತ್ತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಪ್ರಾಧಿಕಾರ ತಿಳಿಸಿದೆ.
ಸೌದಿ ಏರ್ಲೈನ್ಸ್ ವಿಮಾನ ನಿಲ್ದಾಣದಲ್ಲಿದ್ದ ತನ್ನ ಸಿಬ್ಬಂದಿಯೊಬ್ಬರನ್ನು ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ. ಅಲ್ಲದೆ, ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ತನ್ನ ಒಂದು ವಿಮಾನಕ್ಕೆ ಹಾನಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ದಾಳಿಯ ಸಮಯದಲ್ಲಿ ಆ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ತಕ್ಷಣವೇ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗುರುವಾರ ಸಂಜೆ 6 ರ ವೇಳೆಗೆ ವಿಮಾನ ನಿಲ್ದಾಣದ ಎಲ್ಲಾ ವಿಮಾನಯಾನ ಕಾರ್ಯಾಚರಣೆಗಳು ಮತ್ತು ಹಾರಾಟಗಳು ಎಂದಿನಂತೆ ಮರುಪ್ರಾರಂಭವಾಗಿವೆ ಎಂದು ತಿಳಿಸಲಾಗಿದೆ. ಈ ಹಿಂದೆ ಅಖ್ಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿಗಳು ನಡೆದಿದ್ದು, ಅಧಿಕಾರಿಗಳು ಹಾನಿಯ ಮೌಲ್ಯಮಾಪನ ಮತ್ತು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.