ನವದೆಹಲಿ: ಆಹಾರ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆ ಹಾಗೂ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಮುಖ ಆಹಾರ ತಯಾರಿಕಾ ಸಂಸ್ಥೆಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಜನಪ್ರಿಯ ‘ಪ್ರಿಯಾಗೋಲ್ಡ್’ (Priyagold) ಬಿಸ್ಕತ್ ತಯಾರಿಸುವ ಸೂರ್ಯ ಫುಡ್ & ಆಗ್ರೋ ಲಿಮಿಟೆಡ್, 'ದೊಡ್ಲಾ ಡೈರಿ' (Dodla Dairy) ಹಾಗೂ ಉಯಿರ್ ಆರ್ಗ್ಯಾನಿಕ್ ಫುಡ್ಸ್ (Ueir Organic Foods) ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ (Prosecution) ಮೊಕದ್ದಮೆ ಹೂಡಲು ಪ್ರಾಧಿಕಾರ ಅನುಮೋದನೆ ನೀಡಿದೆ.
ಗ್ರಾಹಕರ ಆರೋಗ್ಯ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲವೆಂದು ಸ್ಪಷ್ಟಪಡಿಸಿರುವ ಎಫ್‌ಎಸ್‌ಎಸ್‌ಎಐ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ (FSS Act 2006) ಅಡಿಯಲ್ಲಿ ಈ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತಾ (Zero Tolerance) ನೀತಿಯಡಿ ಕ್ರಮ ಜರುಗಿಸಿದೆ.
ಪ್ರಿಯಾಗೋಲ್ಡ್ ಬಿಸ್ಕತ್ತಿಗೆ ಜಾನುವಾರು ಮೇವಿನ ತೌಡು ಬಳಕೆ
ಗ್ರಾಹಕರೊಬ್ಬರು ನೀಡಿದ ದೂರಿನ ಮೇರೆಗೆ ಸೂರ್ಯ ಫುಡ್ & ಆಗ್ರೋ ಕಾರ್ಖಾನೆಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಪ್ರಿಯಾಗೋಲ್ಡ್ ಬಿಸ್ಕತ್‌ಗಳಲ್ಲಿ ಫೈಬರ್ (ನಾರಿನಂಶ) ಹೆಚ್ಚಿಸಲು ಮನುಷ್ಯರು ಸೇವಿಸಲು ಯೋಗ್ಯವಲ್ಲದ, ಕೇವಲ ಹಸು-ದನಗಳ ಮೇವಿಗಾಗಿ ಮೀಸಲಿಟ್ಟಿದ್ದ ಗೋಧಿ ತೌಡನ್ನು (Cattle feed bran) ಕಚ್ಚಾ ವಸ್ತುವಾಗಿ ಬಳಸುತ್ತಿರುವುದು ಪತ್ತೆಯಾಗಿದೆ. ಈ ತೌಡು ತುಂಬಿದ್ದ ಗೋಣಿಚೀಲಗಳ ಮೇಲೆ ‘ಜಾನುವಾರುಗಳ ಆಹಾರಕ್ಕಾಗಿ ಮಾತ್ರ’ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದರೊಂದಿಗೆ ಕಾರ್ಖಾನೆಯಲ್ಲಿ ಶುಚಿತ್ವದ ಕೊರತೆ, ಕೀಟ ನಿಯಂತ್ರಣ ವೈಫಲ್ಯ ಹಾಗೂ ನೌಕರರ ನೈರ್ಮಲ್ಯದ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ.
ದೊಡ್ಲಾ ಡೈರಿ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
ಖಾಸಗಿ ಡೈರಿ ದೈತ್ಯ ದೊಡ್ಲಾ ಡೈರಿಯ 'ಫುಲ್ ಕ್ರೀಮ್ ಹಾಲು' (Full Cream Milk) ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮೊದಲಿಗೆ ಕೊಬ್ಬಿನಂಶದ (Milk Fat) ಕೊರತೆ ಕಂಡುಬಂದಿತ್ತು. ನಂತರ ಹೆಚ್ಚಿನ ತಪಾಸಣೆಗಾಗಿ ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಹಾಲಿನಲ್ಲಿ ಅಪಾಯಕಾರಿ ಡಿಟರ್ಜೆಂಟ್ ಪೌಡರ್ ಅಥವಾ ಕಾಸ್ಟಿಕ್ ಸೋಡಾ ಬೆರೆಸಿರುವುದು ದೃಢಪಟ್ಟಿದೆ. ಕಳಪೆ ಹಾಗೂ ಅತ್ಯಂತ ಅಸುರಕ್ಷಿತ ಹಾಲು ಮಾರಾಟ ಮಾಡುತ್ತಿದ್ದ ದೊಡ್ಲಾ ಡೈರಿ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪ್ರಕ್ರಿಯೆ ಆರಂಭಿಸಲಾಗಿದೆ.
ಉಯಿರ್ ಆರ್ಗ್ಯಾನಿಕ್ ಒಣದ್ರಾಕ್ಷಿಯಲ್ಲಿ ಕೀಟನಾಶಕಗಳ ವಿಷಾಂಶ
ಆರ್ಗ್ಯಾನಿಕ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಉಯಿರ್ ಆರ್ಗ್ಯಾನಿಕ್ ಫುಡ್ಸ್ ಸಂಸ್ಥೆಯ ಹಳದಿ ಒಣದ್ರಾಕ್ಷಿ (Yellow Raisins) ಮಾದರಿಗಳನ್ನು ಪರೀಕ್ಷಿಸಿದಾಗ, ನಿಗದಿತ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ಅಪಾಯಕಾರಿ ಕೀಟನಾಶಕಗಳ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಪ್ರಯೋಗಾಲಯದ ವರದಿಯಲ್ಲಿ ಅಜಾಕ್ಸಿಸ್ಟ್ರೋಬಿನ್, ಫ್ಲೂಯೊಪೈರಾಮ್, ಇಮಿಡಾಕ್ಲೋಪ್ರಿಡ್ ಹಾಗೂ ಥಿಯಾಮೆಥಾಕ್ಸಾಮ್‌ನಂತಹ ವಿಷಕಾರಿ ಅಂಶಗಳು ಇರುವುದು ಸಾಬೀತಾಗಿದ್ದು, ಇದನ್ನು ಸಾರ್ವಜನಿಕ ಬಳಕೆಗೆ ಸಂಪೂರ್ಣ ಅಸುರಕ್ಷಿತ ಎಂದು ಘೋಷಿಸಲಾಗಿದೆ.
ಇದಲ್ಲದೆ, ನರ್ಪಧಮ್ ಫುಡ್ಸ್, ಸನ್ ರಿಡ್ಜಸ್ ಹೆಲ್ತ್ ಕೇರರ್ಸ್ ಹಾಗೂ ಶಾ ಕಾಂತಿಲಾಲ್ ಜಯಂತಿಲಾಲ್ ಸಂಸ್ಥೆಗಳಿಗೂ ನಿಯಮ ಉಲ್ಲಂಘನೆಗಾಗಿ ಎಫ್‌ಎಸ್‌ಎಸ್‌ಎಐ ನೋಟಿಸ್ ಜಾರಿ ಮಾಡಿದೆ.