ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿದ್ದ 174 ಪ್ರಯಾಣಿಕರ ಪ್ರಾಣವನ್ನು ಉಳಿಸಲು ಮತ್ತು ದೊಡ್ಡಮಟ್ಟದ ದುರಂತವನ್ನು ತಪ್ಪಿಸಲು ಕಾರಣರಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅಸಾಧಾರಣ ಧೈರ್ಯ ಮತ್ತು ಸಾಹಸವನ್ನು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಜೆ.ಪಿ. ಸಿಂಗ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಟೆಲ್ ಅವೀವ್‌ನಲ್ಲಿ ಆಯೋಜಿಸಲಾಗಿದ್ದ 'ಭಾರತ-ಇಸ್ರೇಲ್ ಉತ್ಸವ ಹಾಗೂ ಭಾರತೀಯ ಯೆಹೂದಿಗಳ ರಾಷ್ಟ್ರೀಯ ಸಮಾವೇಶ'ದಲ್ಲಿ ಮಾತನಾಡಿದ ರಾಯಭಾರಿ ಜೆ.ಪಿ. ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಫ್ಲೈದುಬೈಯ ಎಫ್‌ಜೆಡ್ 1073 (FZ1073) ವಿಮಾನದಲ್ಲಿ ನಡೆದ ಆಪತ್ಸಮಯದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತೋರಿದ ಶೌರ್ಯವು ಇಡೀ ಇಸ್ರೇಲ್ ಮತ್ತು ಜಗತ್ತಿಗೆ ಭಾರತೀಯರ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಅವರು ಬಣ್ಣಿಸಿದರು. ಗಾಯಗೊಂಡಿರುವ ಪೈಲಟ್ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ರಾಯಭಾರಿಗಳು ಹಾರೈಸಿದ್ದಾರೆ.
ಬುಧವಾರ ನಡೆದ ಈ ಘಟನೆಯಲ್ಲಿ, ವಿಮಾನದ ಸಹ-ಪೈಲಟ್ ಚಾಕುವಿನಿಂದ ದಾಳಿ ನಡೆಸಿದಾಗ ವಿಮಾನವು ತೀವ್ರವಾಗಿ ಕೆಳಮುಖವಾಗಿ ಧುಮುಕಿತ್ತು. ಈ ಸಂದರ್ಭದಲ್ಲಿ ಧೈರ್ಯಗೆಡದ ಭಾರತೀಯ ಕಮಾಂಡರ್ ಸ್ಮಿತ್ ಮಚ್ಚರ್ ಅವರು ದಾಳಿಕೋರನೊಂದಿಗೆ ಹೋರಾಡಿ, ಹೇಗಾದರೂ ಮಾಡಿ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪ್ರಯಾಣಿಕರು ಒಳಬಂದು ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು.
ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್ ಅವರಿಗೆ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಹಾಗೂ ಚೇತರಿಕೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ಭಾರತ ಸರ್ಕಾರದ ವಿದೇಶಾಂಗ ವ್ಯವಗ್ರಹಗಳ ಸಚಿವಾಲಯ ಹಾಗೂ ಯುಎಇಯಲ್ಲಿರುವ ಭಾರತೀಯ ದೂತವಾಸವು ಅವರ ಆರೋಗ್ಯ ಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದೆ. ಕ್ಯಾಪ್ಟನ್ ಮಚ್ಚರ್ ಅವರ ಈ ಶೌರ್ಯ ಹಾಗೂ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಪ್ರಶಂಸೆಗಳು ಮತ್ತು ಬೆಂಬಲಕ್ಕೆ ಭಾರತ ಸರ್ಕಾರವು ತೀವ್ರ ಕೃತಜ್ಞತೆಯನ್ನು ಸಲ್ಲಿಸಿದೆ.