ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027 ರ ಸೀಸನ್‌ಗಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ದೆಹಲಿ ಕ್ಯಾಪಿಟಲ್ಸ್ (DC) ತಂಡದ ಹೊಸ ಮುಖ್ಯ ಕೋಚ್ ಆಗಿ ಮಂಗಳವಾರ ನೇಮಕ ಮಾಡಲಾಗಿದೆ. ಈ ಮೂಲಕ ಫ್ರಾಂಚೈಸಿಯು ತನ್ನ ಕೋಚಿಂಗ್ ಬಳಗವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಈ ಹಿಂದೆ ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಹೇಮಂಗ್ ಬದಾನಿ ಅವರ ಸ್ಥಾನವನ್ನು ಸೌರವ್ ಗಂಗೂಲಿ ಅಲಂಕರಿಸಲಿದ್ದಾರೆ. ಗಂಗೂಲಿಗೆ ದೆಹಲಿ ಫ್ರಾಂಚೈಸಿಯೊಂದಿಗೆ ಹಳೆಯ ನಂಟಿದೆ. ಅವರು 2019 ರಲ್ಲಿ ಸಲಹೆಗಾರರಾಗಿ ಫ್ರಾಂಚೈಸಿಯೊಂದಿಗೆ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ನಂತರ ಪುರುಷರ ಮತ್ತು ಮಹಿಳಾ ತಂಡಗಳೆರಡಕ್ಕೂ ಕ್ರಿಕೆಟ್ ನಿರ್ದೇಶಕರಾಗಿ (Director of Cricket) ವಿವಿಧ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಸ್ಎ20 (SA20) ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದೊಂದಿಗೆ ಯಶಸ್ವಿ ಕೋಚಿಂಗ್ ಅವಧಿಯನ್ನು ಪೂರೈಸಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ, ಈಗ ಐಪಿಎಲ್‌ನಲ್ಲಿ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ (JSW Sports) ಸಂಸ್ಥೆಯು 2027 ಮತ್ತು 2028 ರ ಐಪಿಎಲ್ ಸೀಸನ್‌ಗಳಿಗಾಗಿ ದೆಹಲಿ ಕ್ಯಾಪಿಟಲ್ಸ್ ತಂಡದ ಕಾರ್ಯಾಚರಣೆಯ ನಿಯಂತ್ರಣವನ್ನು ವಹಿಸಿಕೊಂಡಿರುವ ಬೆನ್ನಲ್ಲೇ ಈ ಮಹತ್ವದ ನೇಮಕ ಹೊರಬಿದ್ದಿದೆ.
ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಮಾತನಾಡಿರುವ ಸೌರವ್ ಗಂಗೂಲಿ, ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ ತಮ್ಮ ಹೊಸ ಪ್ರಯಾಣವನ್ನು ಆರಂಭಿಸಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಮ್ಮ ಹೃದಯಕ್ಕೆ ಬಹಳ ಹತ್ತಿರವಾದ ಫ್ರಾಂಚೈಸಿ ಎಂದು ಬಣ್ಣಿಸಿರುವ ಅವರು, ತಂಡದಲ್ಲಿ ಪ್ರತಿಭಾವಂತ ಆಟಗಾರರ ಸಮೂಹವಿದ್ದು, ಮುಂಬರುವ ಐಪಿಎಲ್‌ನಲ್ಲಿ ಸಕಾರಾತ್ಮಕ ಹಾಗೂ ನಿರ್ಭೀತ ಕ್ರಿಕೆಟ್ ಆಡುವ ಬಲವಾದ ತಂಡವನ್ನು ಕಟ್ಟುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೌರವ್ ಗಂಗೂಲಿ ಅವರ ದೀರ್ಘಕಾಲದ ಅನುಭವ ಮತ್ತು ದೂರದೃಷ್ಟಿಯು ತಂಡಕ್ಕೆ ದೊಡ್ಡ ಬಲ ತರಲಿದೆ ಎಂದು ದೆಹಲಿ ಕ್ಯಾಪಿಟಲ್ಸ್ ಅಧ್ಯಕ್ಷ ಹಾಗೂ ಸಹ-ಮಾಲೀಕ ಪಾರ್ಥ ಜಿಂದಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಜಿಎಂಆರ್ ಸ್ಪೋರ್ಟ್ಸ್ ಸಂಸ್ಥಾಪಕ ಹಾಗೂ ಸಹ-ಮಾಲೀಕ ಕಿರಣ್ ಕುಮಾರ್ ಗಾಂಧಿ ಕೂಡ ತಿಳಿಸಿದ್ದು, ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವ ತಂಡಕ್ಕೆ ಗಂಗೂಲಿ ಅವರ ಕ್ರಿಕೆಟ್ ಪರಿಣತಿ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಯುವರಾಜ್ ಸಿಂಗ್ ಸಹಾಯಕ ಹಾಗೂ ಬೌಲಿಂಗ್ ಕೋಚ್ ಆಗಿ, ಚಮಿಂಡ ವಾಸ್ ವೇಗದ ಬೌಲಿಂಗ್ ಕೋಚ್ ಆಗಿ ಮತ್ತು ಅಮಿತ್ ಮಿಶ್ರಾ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದು, ಗಂಗೂಲಿ ಅವರ ಆಗಮನದಿಂದ ದೆಹಲಿ ತಂಡದ ಬೆಂಚ್ ಬಲ ಮತ್ತಷ್ಟು ಹೆಚ್ಚಾಗಿದೆ.