ಬೆಂಗಳೂರು: 2026–27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಆಡಳಿತ ಸೇವೆಗಳನ್ನು ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಘೋಷಿಸಿದೆ. ಭೂ ದಾಖಲೆಗಳ ಡಿಜಿಟಲೀಕರಣ, ನೋಂದಣಿ ವ್ಯವಸ್ಥೆಯ ಸುಧಾರಣೆ ಹಾಗೂ ಆಡಳಿತ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
‘ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆ’ಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು ಹಾಗೂ ಇ-ಆಸ್ತಿ ಪೋರ್ಟಲ್‌ಗಳಲ್ಲಿ ಇರುವ ಜಮೀನು ಮತ್ತು ಆಸ್ತಿ ಸಂಬಂಧಿತ ದತ್ತಾಂಶಗಳನ್ನು GIS ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಸಂಗ್ರಹಿಸಿ ಏಕರೂಪದಲ್ಲಿ ದಾಖಲೆಗಳನ್ನು ನಿರ್ವಹಿಸುವ ಯೋಜನೆ ಕೈಗೊಳ್ಳಲಾಗುತ್ತದೆ.
ಇದೇ ವೇಳೆ 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದುವಂತೆ ‘ಭೂಮಿ-8.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಸುಮಾರು 50 ಕೋಟಿ ರೂ. ವೆಚ್ಚ ಮಾಡುವುದಾಗಿ ಘೋಷಿಸಲಾಗಿದೆ.
ಭೂಮಾಪನ ಇಲಾಖೆಯ ಮೂಲ ದಾಖಲೆಗಳು 160 ವರ್ಷಕ್ಕೂ ಹೆಚ್ಚು ಹಳೆಯದಾಗಿರುವ ಹಿನ್ನೆಲೆ, ಅವುಗಳನ್ನು ಸಂರಕ್ಷಿಸಲು ರಾಜ್ಯದ ಎಲ್ಲಾ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನವೀಕೃತ ಅಭಿಲೇಖಾಲಯಗಳನ್ನು 72 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಹಾಗೂ ತಂತ್ರಾಂಶದಲ್ಲಿನ ತೊಡಕುಗಳನ್ನು ನಿವಾರಿಸಲು 65 ಕೋಟಿ ರೂ. ವೆಚ್ಚದಲ್ಲಿ ‘ಕಾವೇರಿ 3.0’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಇದರ ಜೊತೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ‘ಪ್ರಜಾಸೌಧ’ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಘೋಷಿಸಿದೆ. ಈ ಕ್ರಮಗಳಿಂದ ಆಡಳಿತ ಸೇವೆಗಳ ಲಭ್ಯತೆ ಹೆಚ್ಚಿಸಿ ನಾಗರಿಕರಿಗೆ ವೇಗವಾದ ಸೇವೆ ನೀಡುವ ಉದ್ದೇಶ ಹೊಂದಿದೆ.