ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಕಾಷನ್ ಡೆಪಾಸಿಟ್ ಕಟ್ಟಲು ಅ.13ರವರೆಗೆ ಅವಕಾಶ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಹೊರತುಪಡಿಸಿ ಉಳಿದ ಎಲ್ಲ ವರ್ಗದವರು ನಾಲ್ಕು ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು. ಪರಿಶಿಷ್ಟ ಅಭ್ಯರ್ಥಿಗಳು ಒಂದು ಲಕ್ಷ ರೂಪಾಯಿ ಮುಂಗಡ ಹಣ ಕಟ್ಟಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮುಂಗಡ ಶುಲ್ಕ ಪಾವತಿ ಬಳಿಕ ಅ.13ರವರೆಗೆ ಆಪ್ಷನ್ಸ್ ದಾಖಲಿಸಬಹುದು. ಅ.14ರಂದು ಬೆಳಿಗ್ಗೆ 11ಗಂಟೆಗೆ ತಾತ್ಕಾಲಿಕ ಹಾಗೂ ಸಂಜೆ 6ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಕಾಷನ್ ಡೆಪಾಸಿಟ್ ಹೊಂದಾಣಿಕೆ ನಂತರ ಕಟ್ಟ ಬೇಕಾದ ಬಾಕಿ ಶುಲ್ಕವನ್ನು ಅ.15ರಿಂದ 16ರವರೆಗೆ ಪಾವತಿಸಬೇಕು. ಮೂಲ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಅ.16 ಮತ್ತು 17ರಂದು ಸಲ್ಲಿಸಿದ ನಂತರ ಪ್ರವೇಶ ಆದೇಶವನ್ನು ಡೌನ್ಲೋಡ್ ಮಾಡಿಕೊಂಡು ಅ.19ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಅವರು ತಿಳಿಸಿದ್ದಾರೆ.