LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ ಮಾವು ಮೇಳ- 2025 .. ತೋಟಗಾರಿಕೆ ಬೆಳೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ- ಕೆ.ರಾಘವೇಂದ್ರ ಹಿಟ್ನಾಳ ----


ಕೊಪ್ಪಳ ಮೇ 13  ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಪಪ್ಪಾಯಿಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗುವುದರಿಂದ ರೈತರು ಇವುಗಳನ್ನು ಬೆಳೆಸುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಮಂಗಳವಾರ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಉಪನಿರ್ದೆಶಕರ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಕೊಪ್ಪಳ ಮಾವು ಮೇಳ-2025. ಪ್ರದರ್ಶನ ಹಾಗೂ ಮಾರಾಟ ಮೇಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹೆಚ್ಚು ಮಾವು ಬೆಳೆದ ರೈತರಿಗೆ ಮಾರ್ಕೆಟಿಂಗ್ ಆಗಬೇಕೆಂದು ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ ಕೊಪ್ಪಳ ಮಾವು ಮೇಳ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಮಾವಿನ ಹಣ್ಣುಗಳನ್ನು ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಗಬೇಕು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ಮಾವಿನ ಬೆಲೆ ಸ್ವಲ್ಪ ಕಡಿಮೆಯಾಗಿದೆ ಎಂದರು. ಈ ಮೇಳದಲ್ಲಿ ಒಂದು ಕೆ. ಜಿ ಮಿಯಾಜಾಕಿ ಹಣ್ಣಿನ ಬೆಲೆ 2. 50 ಲಕ್ಷ ಇರುವ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಿರುವುದು ಮೇಳದ ಮತ್ತೊಂದ ವಿಶೇಷತೆಯಾಗಿದೆ ಇಂತಹ ಹಣ್ಣುಗಳನ್ನು ನಮ್ಮ ಭಾಗದಲ್ಲಿ ರೈತರು ಬೆಳೆಯುವಂತಾಗಬೇಕೆಂದು ಹೇಳಿದರು.

ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಅವರು ಮಾತನಾಡಿ, ತೋಟಗಾರಿಕೆ ಇಲಾಖೆ ವತಿಯಿಂದ 9ನೇ ವರ್ಷದ ಮಾವು ಮೇಳವನ್ನು ಕಾರ್ಯಕ್ರಮವನ್ನು ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೇ 22ರ ವರೆಗೆ ಹತ್ತು ದಿನಗಳ ಕಾಲ ತೋಟಗಾರಿಕೆ ಕಚೇರಿ ಆವರಣದಲ್ಲಿ ನಡೆಯಲಿದೆ. 100ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಮೇಳದಲ್ಲಿ 30ಕ್ಕೂ ಹೆಚ್ಚು ಸ್ಟಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ನೈಸರ್ಗೀಕವಾಗಿ ಮಾಗಿಸಿದ ಹಣ್ಣುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರಿಗೆ ಮಾರಕಟ್ಟೆಗಿಂತಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನೈಸರ್ಗಿಕವಾದ ಹಣ್ಣುಗಳು ಸಿಗಲಿವೆ. 100 ಕ್ಕೂ ಹೆಚ್ಚು ತಳಿಯ ವಿವಿಧ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಮುಖ್ಯವಾಗಿ ಜಗತ್ತಿನ ದುಬಾರಿ ಮಾವು `ಮೀಯಾ ಜಾಕೀ' ಮಾವಿನ ಹಣ್ಣು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ. `ಮೀಯಾ ಜಾಕೀ' ಮಾವಿನ ತಳಿಯ ಸಸಿಗಳಿಗೆ ಬಹಳ ಬೇಡಿಕೆಯಿದ್ದು, ಈ ಸಸಿಗಳನ್ನು ಸಹ ಮೇಳದಲ್ಲಿ ಮಾರಾಟಕ್ಕಿಡಲಾಗಿದೆ ಎಂದರು.

ವೈಜ್ಞಾನಿಕವಾಗಿ ಹಣ್ಣುಗಳನ್ನು ಯಾವ ರೀತಿ ಮಾಗಿಸಬೇಕೆಂಬುವುದಕ್ಕೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ನೈಸರ್ಗಿಕವಾಗಿ ಹಣ್ಣು ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಮೇಳದಲ್ಲಿ ನಮ್ಮ ಜಿಲ್ಲೆಯ 10 ರಿಂದ 12 ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿಡಲಾಗಿದ್ದು, ಕೊಪ್ಪಳ ಕೇಸರ್ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮೇಳದಲ್ಲಿ ಉಪ್ಪಿನ ಕಾಯಿ ಮಾರಟಕ್ಕೂ ರೈತರು ಮುಂದೆ ಬಂದಿದ್ದಾರೆ ಹಾಗೂ ಇತರೆ ಮಾವಿನ ಉತ್ಪನ್ನಗಳನ್ನು ಸಹ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಈ ಮಾವು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಮಾಜಿ ಸಂಸದರಾದ ಕರಡಿ ಸಂಗಣ್ಣ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಕೊಪ್ಪಳ ಮಾವು ಮೇಳದ ವಿವರ: ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ 9ನೇ ವರ್ಷದ ಮಾವು ಮೇಳವನ್ನು ಮೇ. 13 ರಿಂದ ಮೇ 22ರ ವರೆಗೆ 10 ದಿನಗಳ ಕಾಲ ತೋಟಗಾರಿಕೆ ಇಲಾಖೆ ಕೊಪ್ಪಳ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 6000 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆಯ ತಳಿಯಾಗಿದೆ ಹಾಗೂ ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ. ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ಹಿಂದಿನ ವರ್ಷದ ಮೇಳಕ್ಕಿಂತಲೂ 100 ಕ್ಕೂ ಹೆಚ್ಚಿನ ರೈತರು ಭಾಗವಹಿಸಲು ಪೈಪೋಟಿ ಮೇಲೆ ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಸ್ಟಾಲ್‌ಗಳನ್ನು ನೊಂದಾಯಿಸಿರುತ್ತಾರೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಗೆ ನೇರವಾಗಿ ಮಾರಾಟ ಮಾಡಲು ರೈತರು ಹೆಚ್ಚಾಗಿ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೇಳದಲ್ಲಿ ಉಪ್ಪಿನಕಾಯಿ ಮಾವನ್ನು ಸಹ ಮಾರಾಟ ಮಾಡಲಾಗುತ್ತಿದ್ದು ಹಾಗೂ ರೈತರೇ ತಯಾರಿಸಿದ ಉಪ್ಪಿನಕಾಯಿಗಳನ್ನು ಆಕರ್ಷಕವಾದ ಬಾಟಲ್‌ಗಳಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.

ಈ ವರ್ಷವೂ ಕೂಡ ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣಾದ “ಮೀಯಾಜಾಕಿ" ಎಂಬ ಜಪಾನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾವಿನ ತಳಿಯ ಬೆಲೆಯು 1 ಕೆ.ಜಿ.ಗೆ ರೂ.2.50 ಲಕ್ಷ ಬೆಲೆ ಬಾಳುತ್ತದೆ. ಈ ಮೇಳದಲ್ಲಿ ಮಿಯಾಜಾಕಿ ಹಣ್ಣಿನ ಗಿಡಗಳನ್ನು ಬೆಳೆಯಲು ಆಸಕ್ತಿ ಇರುವ ರೈತರಿಗೆ ಗುಣಮಟ್ಟ ಗಿಡಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.

ಈ ಮೇಳದಲ್ಲಿ 15 ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ರೈತರು ನೇರವಾಗಿ ಮಾರಾಟ ಮಾಡುವ ಅನುಕೂಲ ಕಲ್ಪಿಸಲಾಗಿದೆ. ಮೇಳದಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದ ಹಾಗೂ ದೃಢೀಕರಣದ ಪ್ರಮಾಣ ಪತ್ರ ಹೊಂದಿದ ರೈತರು ಸಹ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಭಾಗವಹಿಸಿರುತ್ತಾರೆ. ಈ ಮೇಳದಲ್ಲಿ ವಿವಿಧ ತಳಿಗೆ ಯೋಗ್ಯ ಬೆಲೆಯನ್ನು ನಿರ್ಧರಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಮಾವು ಮೇಳದಲ್ಲಿ ಭಾಗವಹಿಸಿ ರೈತರ ಆದಾಯ ಹೆಚ್ಚಿಸಬೇಕು.

ಈ ಮೇಳದಲ್ಲಿ ಭಾಗವಹಿಸಲು 100 ಕ್ಕೂ ಹೆಚ್ಚಿನ ರೈತರು ನೇರವಾಗಿ ನೊಂದಾಯಿಸಿರುತ್ತಾರೆ. ರೈತರಿಗಾಗಿ ಉಚಿತವಾಗಿ 30 ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10 ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಲು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳ ನೂರಾರು ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ. ಈ ಮೇಳದಲ್ಲಿ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಾಗಿಸುವ ಕುರಿತು ಭಾರತೀಯ ತೋಟಗಾರಿಕೆ ಸಂಶೋದನಾ ಸಂಸ್ಥೆ (IIHR ), ಹೇಸರಘಟ್ಟ, ಬೆಂಗಳೂರು ರವರು ಅಭಿವೃದ್ಧಿಪಡಿಸಿರುವ ಹಣ್ಣು ಮಾಗಿಸುವ ಘಟಕಗಳನ್ನು ರೈತರಿಗೆ ಇಲಾಖೆಯು ಸಹಾಯಧನದ ಮೂಲಕ ಮಾವು ಬೆಳೆಯುವ ರೈತರಿಗೆ ನೀಡಲಾಗಿದೆ. ನೈಸರ್ಗಿಕವಾಗಿ ಹಣ್ಣುಗಳನ್ನು ಮಾಗಿಸಲು"ಎನ್-ರೈಪ್ (en-ripe) ”ಎಂಬ ನೈಸರ್ಗಿಕವಾಗಿ ಹಣ್ಣು ಮಾಗಿಸುವ ಪಂಚ್ ಹೋಲ್ ಪೌಚ್ ಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ. ಈ ಪೌಚ್‌ನ್ನು ಹೋಲ್ ಮಾಡಿ 10 ಕೆ.ಜಿ. ಮಾವಿನ ಕಾಯಿಯ ಕೆಳಗಡೆ ಇಟ್ಟಾಗ 48 ಗಟೆಗಳಲ್ಲಿ ಗುಣಮಟ್ಟದ ಆರೋಗ್ಯಕರ ಮಾವಿನ ಕಾಯಿಗಳು ಒಂದೇ ರೀತಿಯ ಬಣ್ಣ ಹೊಂದಿ ಹಣ್ಣಾಗುತ್ತವೆ. ಇದು ನೈಸರ್ಗಿಕವಾದ ಇಥಲಿನ್ ಹೊಂದಿರುತ್ತದೆ. ಈ ಪೌಚ್ ಗೆ ರೈತರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ.

ಈ ಮೇಳದಲ್ಲಿ ಮಾವು ಬೆಳೆಯಲು ಆಸಕ್ತಿ ಹೊಂದಿದ ರೈತರಿಗೆ ಮಾವನ್ನು ಬೆಳೆಯುವ ಬಗ್ಗೆ ಹೊಸ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆ, ಗುಣಮಟ್ಟದ ಮಾವು ಮತ್ತು ಇಳುವರಿ ಹೇಗೆ ತೆಗೆಯಬೇಕೆಂಬುವುದರ ಬಗ್ಗೆಯು ತಿಳಿಸಿಕೊಡಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುವ ಬಗ್ಗೆ ಹಾಗೂ ವಿವಿಧ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕುರಿತು ಮಾಹಿತಿಯನ್ನು ಸಹ ನೀಡಲಾಗುತ್ತಿದೆ.

"ಕೊಪ್ಪಳ ಕೇಸರ್ ಮಾವು" ಬ್ರಾಂಡ್‌ನ ಬಾಕ್ಸ್ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಸಾರ್ವಜನಿಕರಿಗೆ ಬಾಕ್ಸ್ನಲ್ಲಿನ ಹಣ್ಣುಗಳನ್ನು ಸಿಗುವಂತೆ ಅನುಕೂಲ ಮಾಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಮಾವು ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ಸಾರ್ವಜನಿಕರು ಬಾಕ್ಸ್ಗಳನ್ನು ಮೆಚ್ಚಿಕೊಂಡಿರುತ್ತಾರೆ. ಹಾಗೂ ಈ ಬಾಕ್ಸ್ಗಳನ್ನು ರೈತರಿಗೆ ಆರ್.ಕೆ.ವಿ.ವಾಯ್.ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ.

ಇದಲ್ಲದೇ ಮಾವಿನ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ವಿಶಿಷ್ಟ ಅನುಭವ ನೀಡಬಲ್ಲದಾಗಿದೆ. ಈ ಮೇಳದಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಆಕರ್ಷಕ ಸೆಲ್ಪಿ ಪಾಯಿಂಟ್ ನಿರ್ಮಿಸಲಾಗಿದೆ. ಈ ಸೆಲ್ಸಿ ಪಾಯಿಂಟ್ ಮಾವಿನ ಮಾದರಿ ಹೊಂದಿದ್ದು ಅತ್ಯಾಕರ್ಷಣೆವಾಗಿ ಜನರನ್ನು ಆಕರ್ಷಿಸಿಸುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು