ಬೆಂಗಳೂರು: ಕೆಪಿಎಸ್ಸಿ ಹಗರಣಗಳ ಸರಮಾಲೆಯಿಂದ ರಾಜ್ಯದ ಶಿಕ್ಷಕರು, ಪದವೀಧರರು ರೋಸಿ ಹೋಗಿದ್ದು, ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್'ಗೆ ನಡೆಯಲಿರುವ ಚುನಾವಣೆಯ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಎ.ಪಿ.ರಂಗನಾಥ್ ಅವರು, ಕೆ.ಎಂ.ಸುರೇಶ್ ಅವರು ನಾಮಪತ್ರಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಹಾಜರಿದ್ದು ಕೇಂದ್ರ ಸಚಿವರು ಮಾತನಾಡಿದರು.
ಕೆಪಿಎಸ್ಸಿ ನೇಮಕ ಅಷ್ಟೇ ಅಲ್ಲದೆ, ಅನೇಕ ಹಗರಣಗಳಲ್ಲಿ ರಾಜ್ಯ ಸರ್ಕಾರ ಭಾಗಿಯಾಗಿದೆ. ಹೀಗಾಗಿ ಯುವಜನರು ಕಾಂಗ್ರೆಸ್ ಮೇಲೆ ರೋಸಿ ಹೋಗಿದ್ದಾರೆ. ಹೀಗಾಗಿ ಶಿಕ್ಷಕರು, ಪದವೀಧರರು, ಯುವಜನರು ಮುಂದಿನ ಪರಿಷತ್ ಚುನಾವಣೆಯಲ್ಲಿ ಸರಕಾರಕ್ಕೆ ವಿರುದ್ಧವಾಗಿ ಮತ ಹಾಕಲಿದ್ದಾರೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪರಿಷತ್ ನ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ- ಜೆಡಿಎಸ್ ಅಧಿಕಾರದಲ್ಲಿದ್ದಾಗ ದೊಡ್ಡ ಕೊಡುಗೆ ನೀಡಿದೆ. ಕೆಪಿಎಸ್ಸಿ ಹಗರಣ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇಂತಹ ಸಂದರ್ಭದಲ್ಲಿ ಪದವೀಧರರು ಆಡಳಿತ ಪಕ್ಷವನ್ನು ವಿರೋಧಿಸುತ್ತಿದ್ದಾರೆ ಎಂದ ಅವರು; ಪರಿಷತ್ ಚುನಾವಣೆಗೂ ಇದಕ್ಕೂ ಹೋಲಿಕೆ ಬೇಡ. ಇದು ಯಾವುದೇ ದಿಕ್ಸೂಚಿ ಚುನಾವಣೆ ಅಲ್ಲ ಎಂದರು ಕೇಂದ್ರ ಸಚಿವರು.
ನೈಸ್ ವಿಚಾರದಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಕಟುವಾದ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. ನವೆಂಬರ್ ಎರಡರಂದು ವಿಚಾರಣೆಗೆ ನ್ಯಾಯಾಲಯ ನಿಗದಿ ಮಾಡಿದೆ. ಅವರ ಪರ ವಕೀಲರು ಸ್ಟೇ ಕೊಡಿ ಅಂತ ಕೇಳಿದ್ದಾರೆ. ಅಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸ್ಟೇ ಸಿಗಲಿದೆ ಅಂತ ಹೋಗಿದ್ದರು. ರೈತರ ಹೋರಾಟಕ್ಕೆ ನ್ಯಾಯಯುತ ಬೆಲೆ ಸಿಕ್ಕಿದೆ. ನೈಸ್ ವಿಚಾರ ದಾರಿ ತಪ್ಪಿಸಲು ಬಿಜೆಪಿ, ಜೆಡಿಎಸ್ ಮೇಲೆ ಆರೋಪ ಮಾಡಿದ್ದಾರೆ. ಅವರ ಪಾಪದ ಕೊಡ ತುಂಬಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.