ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರಿಂದ ಭವ್ಯ ಪ್ರತಿಮೆ ಅನಾವರಣ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ
ನಂದಗಡ (ಬೆಳಗಾವಿ): ಕನ್ನಡ ಮಣ್ಣಿನ ವೀರಪುತ್ರ, ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ಖಾನಾಪುರ ತಾಲ್ಲೂಕಿನ ನಂದಗಡದ ಪುಣ್ಯಭೂಮಿಯಲ್ಲಿ ನಿರ್ಮಿಸಲಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ)” ಅನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ರಾಯಣ್ಣನವರ ಸಮಾಧಿ ಬಳಿಯ ಕೆರೆಯ ಹತ್ತಿರ ಸ್ಥಾಪಿಸಲಾದ ಭವ್ಯ ಪ್ರತಿಮೆಯನ್ನೂ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯವನ್ನು ತನ್ನ ಶೌರ್ಯ ಮತ್ತು ಪರಾಕ್ರಮದಿಂದ ಬಹುಕಾಲ ಕಾಡಿದ ಸಂಗೊಳ್ಳಿ ರಾಯಣ್ಣನ ಜೀವನ ಸರ್ವಕಾಲಕ್ಕೂ ಸ್ಪೂರ್ತಿದಾಯಕವಾಗಿದ್ದು, ಅವರ ದೇಶಪ್ರೇಮ ಮತ್ತು ತ್ಯಾಗವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವಲ್ಲಿ ಈ ವಸ್ತು ಸಂಗ್ರಹಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮವು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ರಾಯಣ್ಣನ ಅಭಿಮಾನಿಗಳು ಭಾಗವಹಿಸಿದ್ದರು.
ನಂತರ ಮುಖ್ಯಮಂತ್ರಿಗಳು ರಾಯಣ್ಣನವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸುವ ಮೂಲಕ ಆ ವೀರ ಚೇತನಕ್ಕೆ ಗೌರವ ಸಮರ್ಪಿಸಿದರು. ಈ ವೇಳೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಸಂಗೊಳ್ಳಿ ರಾಯಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಈ ಮಣ್ಣಿನ ಸ್ವಾಭಿಮಾನ ಮತ್ತು ಪ್ರತಿರೋಧದ ಸಂಕೇತ. ಅವರ ಶೌರ್ಯ ಮತ್ತು ತ್ಯಾಗದ ಕಥೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.