ನವದೆಹಲಿ: ಕೇಂದ್ರ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಚರ್ಚೆಗಳ ಬೆನ್ನಲ್ಲೇ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಕೇಂದ್ರ ಸಚಿವ ಎಲ್. ಮುರುಗನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ದ್ರಾವಿಡ ನಾಡಿನಲ್ಲಿ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸುವ ಗುರಿಯೊಂದಿಗೆ, ತಮಿಳುನಾಡಿನಲ್ಲಿ ಸಂಪೂರ್ಣವಾಗಿ ಸಂಘಟನಾ ಕಾರ್ಯಕ್ಕೆ ಇಳಿಯಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
2029ರ ಲೋಕಸಭೆ ಗುರಿ: ತಳಮಟ್ಟದಿಂದ ಕಾರ್ಯಕರ್ತರ ಸಜ್ಜು
ಕೇಂದ್ರದ ಹೊಣೆಗಾರಿಕೆಯಿಂದ ಮುಕ್ತರಾಗಿರುವ ಮುರುಗನ್, ಮುಂದಿನ 2029ರ ಸಾರ್ವತ್ರಿಕ ಚುನಾವಣೆಯತ್ತ ಚಿತ್ತ ನೆಟ್ಟಿದ್ದಾರೆ. ತಮಿಳುನಾಡಿನ ಪ್ರತಿ ಹಳ್ಳಿ-ಬೂತ್ ಮಟ್ಟದಲ್ಲಿ ಬಿಜೆಪಿಯನ್ನು ಬೇರೂರಿಸಲು ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಭುಜಕ್ಕೆ ಭುಜ ಕೊಟ್ಟು ಪೂರ್ಣಾವಧಿಯಾಗಿ ಕೆಲಸ ಮಾಡಲು ಸಜ್ಜಾಗುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅವರ ಈ ನಡೆ, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಮೋದಿಗೆ ಕೃತಜ್ಞತೆ ಸಲ್ಲಿಸಿದ ಮುರುಗನ್
ತಮ್ಮ ರಾಜೀನಾಮೆ ಬೆನ್ನಲ್ಲೇ ಭಾವುಕ ಮಾತುಗಳನ್ನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶ ಹಾಗೂ ತಮಿಳುನಾಡಿನ ಜನತೆಗೆ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಬದುಕಿನ ಅತ್ಯುನ್ನತ ಗೌರವ ಎಂದು ಸ್ಮರಿಸಿದ್ದಾರೆ. ಸಾಮಾನ್ಯ ದಿನಗೂಲಿ ನೌಕರರ ಕುಟುಂಬದ ಹಿನ್ನೆಲೆಯಿಂದ ಬಂದ ತಮಗೆ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು ಜೀವನದ ದೊಡ್ಡ ಭಾಗ್ಯ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳಲು ನಿರಂತರ ಕಸರತ್ತು ನಡೆಸುತ್ತಿರುವ ಬಿಜೆಪಿಗೆ, ಮುರುಗನ್ ಅವರ ಈ ಪೂರ್ಣಾವಧಿ ಸಂಘಟನಾ ಪ್ರವೇಶವು ಮುಂಬರುವ ದಿನಗಳಲ್ಲಿ ತಮಿಳುನಾಡು ರಾಜಕೀಯ ರಣತಂತ್ರಕ್ಕೆ ಪ್ರಮುಖ ತಿರುವು ನೀಡುವ ಸಾಧ್ಯತೆಯಿದೆ.