ರಾಯಬಾಗ ತಹಶಿಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಬೆಳಗಾವಿ : ಪಹಣಿ ಪತ್ರದಲ್ಲಿದ್ದ ನಿರ್ಬಂಧ ತೆರವಿಗೆ 80 ಸಾವಿರ ರೂ. ಲಂಚಕ್ಕೆ ರಾಯಬಾಗ ತಹಶಿಲ್ದಾರ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದ ಹಿನ್ನಲೆಯಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ತಾಲೂಕಿನ ಸವಸುದ್ದಿ ಗ್ರಾಮದ ರೈತ ಶಿವಾನಂದ ದುಂಡಗಿ ಅವರ ಅಜ್ಜನಿಗೆ 1974 ರಲ್ಲಿ ಭೂ ನ್ಯಾಯಮಂಡಳಿ ಆದೇಶ ದಂತೆ ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷಗಳ ವರೆಗೆ ಪರಬಾರೆ ಮಾಡಬಾರದೆಂದು ನಿರ್ಬಂಧ ಹೇರಲಾಗಿತ್ತು.
ನಿರ್ಬಂಧ ತೆರವು ಮಾಡುವ ಉದ್ದೇಶಕ್ಕೆ ರಾಯಬಾಗ ತಹಶಿಲ್ದಾರ ಕಚೇರಿ ಸಿಬ್ಬಂದಿ ಚಂದ್ರಮಪ್ಪ ಮೋರಟಗಿ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ದಾಳಿಯ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ನಿರಂಜನ ಪಾಟೀಲ, ಗೋವಿಂದಗೌಡ ಹಾಗೂ ಸಿಬ್ಬಂದಿಗಳಾದ ರವೀಂದ್ರ ಮಾವರ್ಕರ, ರಾಜು, ಸಂತೋಷ, ಗಿರೀಶ್, ಅಭಿಜಿತ್, ಬಸವರಾಜ ಉಪಸ್ಥಿತರಿದ್ದರು.