ಮಂಡ್ಯ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಚಲಿಸುತ್ತಿದ್ದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರೊಂದು ಹಾಡುಹಗಲೇ ಏಕಾಏಕಿ ಬೆಂಕಿಗೆ ಆಹುತಿಯಾಗಿ ಧಗಧಗನೆ ಹೊತ್ತಿ ಉರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಸಮೀಪ ನಡೆದಿದೆ. ಕಾರು ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ಕೆಳಗೆ ಇಳಿದಿದ್ದರಿಂದ ಸಂಭವನೀಯ ಭಾರೀ ದುರಂತ ತಪ್ಪಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೆಂಜ್ ಕಾರು ವೇಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ, ಮುಂಭಾಗದ ಎಂಜಿನ್ ಭಾಗದಿಂದ ದಿಢೀರನೆ ದಟ್ಟ ಹೊಗೆ ಹೊರಬರಲಾರಂಭಿಸಿದೆ. ಇದನ್ನು ತಕ್ಷಣವೇ ಗಮನಿಸಿದ ಕಾರಿನ ಮಾಲೀಕ ಕಂ ಚಾಲಕ, ವಾಹನವನ್ನು ತಕ್ಷಣ ರಸ್ತೆಬದಿಗೆ ನಿಲ್ಲಿಸಿ ಕೆಳಗೆ ಧಾವಿಸಿದ್ದಾರೆ. ಅವರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಕಾರಿನಾದ್ಯಂತ ಕ್ಷಣಾರ್ಧದಲ್ಲಿ ವ್ಯಾಪಿಸಿ, ಇಡೀ ವಾಹನ ಹೊತ್ತಿ ಉರಿಯಲಾರಂಭಿಸಿದೆ.
ಹೆದ್ದಾರಿಯಲ್ಲಿ ಆತಂಕ, ಬೆಂಕಿ ನಂದಿಸಿದ ಸಿಬ್ಬಂದಿ:
ಹೆದ್ದಾರಿಯಲ್ಲೇ ಕಾರು ಹೊತ್ತಿ ಉರಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಮದ್ದೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ನೀರು ಹರಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಬೆಂಕಿಯ ತೀವ್ರತೆಗೆ ಐಷಾರಾಮಿ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ