ರಷ್ಯಾದ ಕಮ್ಚಾಟ್ಕಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸಿಸ್ಮೋಲಾಜಿಕಲ್ ಸೆಂಟರ್ (EMSC) ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿವೆ. ಭಾರಿ ತೀವ್ರತೆಯ ಭೂಕಂಪ ಸಂಭವಿಸಿದರೂ ಸಹ ಯಾವುದೇ ಸುನಾಮಿ ಎಚ್ಚರಿಕೆ ಅಥವಾ ಬೆದರಿಕೆ ಇಲ್ಲ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (NOAA) ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಮಾಹಿತಿಯಂತೆ, ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 9:05 ಕ್ಕೆ 152 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದರ ಕೇಂದ್ರಬಿಂದುವು ಕಮ್ಚಾಟ್ಕಾ ಪ್ರದೇಶದಲ್ಲಿದ್ದು, ಇಎಂಎಸ್ಸಿ ವರದಿಯ ಪ್ರಕಾರ ರಷ್ಯಾದ ವಿಲ್ಯುಚಿನ್ಸ್ಕ್ ನಗರದಿಂದ ನೈರುತ್ಯಕ್ಕೆ ಸುಮಾರು 123 ಕಿಲೋಮೀಟರ್ ದೂರದಲ್ಲಿದೆ. ಸುಮಾರು 1.87 ಲಕ್ಷ ಜನಸಂಖ್ಯೆ ಹೊಂದಿರುವ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ನಗರದಿಂದ ದಕ್ಷಿಣ-ನೈರುತ್ಯಕ್ಕೆ 146 ಕಿಲೋಮೀಟರ್ ದೂರದಲ್ಲಿ ಭೂಕಂಪನದ ತೀವ್ರತೆ ಅನುಭವಕ್ಕೆ ಬಂದಿದೆ.
ವಿವಿಧ ಭೂಕಂಪಶಾಸ್ತ್ರ ಸಂಸ್ಥೆಗಳ ವರದಿಗಳಲ್ಲಿ ತೀವ್ರತೆ ಮತ್ತು ಆಳದ ಕುರಿತು ಸಣ್ಣ ವ್ಯತ್ಯಾಸಗಳಿದ್ದು, ಇಎಂಎಸ್ಸಿ ತನ್ನ ವಿವರವಾದ ಅಂಕಿಅಂಶಗಳಲ್ಲಿ ತೀವ್ರತೆಯನ್ನು 6.9 ಎಂದು ದಾಖಲಿಸಿದ್ದರೆ, ಎನ್ಸಿಎಸ್ ಮತ್ತು ಎನ್ಒಎಎ 7.0 ತೀವ್ರತೆ ದಾಖಲಿಸಿವೆ. ಭೂಕಂಪದಿಂದ ಉಂಟಾದ ಆಸ್ತಿಪಾಸ್ತಿ ಹಾನಿ ಅಥವಾ ಸಾವು-ನೋವುಗಳ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.