ಮಂಗಳೂರು : ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಆಕ್ರೋಶಗೊಂಡ ಪತಿಯೊಬ್ಬ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಸೋನಾಲಿ (30) ಕೊಲೆಯಾದ ದುರ್ದೈವಿಯಾಗಿದ್ದು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಾರ್ಕಬನಹಳ್ಳಿಯ ಶಿವಪ್ಪ ಮಾದರ್ ಅವರ ಪುತ್ರ ಶಿವಲಿಂಗಪ್ಪ (40) ಬಂಧಿತ ಆರೋಪಿಯಾಗಿದ್ದಾನೆ.
ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ನಡುವೆ ಅಕ್ಟೋಬರ್ 12 ರಂದು ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಉಂಟಾದ ಆಕ್ರೋಶದಿಂದ ಆರೋಪಿ ಶಿವಲಿಂಗಪ್ಪ ತನ್ನ ಪತ್ನಿ ಸೋನಾಲಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದು, ಕಾವೂರು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.