ಅಮೆರಿಕದ ಪೆನ್ಸಿಲ್ವೇನಿಯಾದ ಈರಿ ನಗರದಲ್ಲಿ ವ್ಯಕ್ತಿಯೊಬ್ಬ ಗರ್ಭಿಣಿ ಮಹಿಳೆ, ಪುಟ್ಟ ಮಕ್ಕಳು ಸೇರಿದಂತೆ ತಮ್ಮ ಎಂಟು ಜನ ಸಂಬಂಧಿಕರು ಹಾಗೂ ಆಪ್ತರನ್ನು ಭೀಕರವಾಗಿ ಗುಂಡಿಕ್ಕಿ ಕೊಂದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಘಟನೆ ಕುರಿತು ಶನಿವಾರ ಮಾಹಿತಿ ನೀಡಿದ ಈರಿ ಪೊಲೀಸ್ ಮುಖ್ಯಸ್ಥ ರಿಕ್ ಲೋರಾ, 45 ವರ್ಷದ ಬಂದೂಕುಧಾರಿ ವ್ಯಕ್ತಿ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ವಿಡಿಯೋ ಮತ್ತು ಆಡಿಯೋ ಆಧಾರಗಳನ್ನು ಪರಿಶೀಲಿಸಿದಾಗ, ಮನೆಯ ಒಳಗಡೆಯಿಂದ ಗುಂಡಿನ ಸದ್ದು ಕೇಳಿಬಂದ ತಕ್ಷಣ ಇಬ್ಬರು ಮಹಿಳೆಯರು ಆತಂಕದಿಂದ ಓಡಿಬಂದು ಮನೆಯ ಬಾಗಿಲು ಬಡಿಯಲು ಪ್ರಾರಂಭಿಸಿದ್ದಾರೆ. ಈ ವೇಳೆ ಹೊರಬಂದ ಬಂದೂಕುಧಾರಿ ಆ ಇಬ್ಬರು ಮಹಿಳೆಯರ ಮೇಲೆಯೂ ಗುಂಡು ಹಾರಿಸಿ ಹತ್ಯೆ ಮಾಡಿ, ನಂತರ ಮರಳಿ ಮನೆಗೆ ತೆರಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಡ್ರೋನ್ ಹಾಗೂ ರೋಬೋಟ್ಗಳನ್ನು ಬಳಸಿ ಪರಿಶೀಲನೆ ನಡೆಸಿದಾಗ, ಮನೆಯ ಹೊರಗೆ ಇಬ್ಬರು ಮಹಿಳೆಯರು ಹಾಗೂ ಒಳಗಡೆ 5 ವರ್ಷದ ಬಾಲಕ, 1 ವರ್ಷದ ಮಗು ಸೇರಿದಂತೆ ಒಟ್ಟು ಎಂಟು ಶವಗಳು ಪತ್ತೆಯಾಗಿವೆ. ಈ ಪೈಕಿ ಏಳು ಜನರು ಬಂದೂಕುಧಾರಿಯ ಸಂಬಂಧಿಕರಾಗಿದ್ದರೆ, ಮತ್ತೊಬ್ಬರು ಗರ್ಭಿಣಿ ಮಹಿಳೆಯ ಸ್ನೇಹಿತೆಯಾಗಿದ್ದಾರೆ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲವಾದರೂ, ಮೃತರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಪೆನ್ಸಿಲ್ವೇನಿಯಾ ರಾಜ್ಯಪಾಲ ಜೋಶ್ ಶಾಪಿರೋ ತೀವ್ರ ಕಂಬನಿ ಮಿಡಿದಿದ್ದು, ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.