ಮೀರತ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ‘ಮೀರತ್ ಬ್ಲೂ ಡ್ರಮ್’ ಹತ್ಯೆ ಪ್ರಕರಣದಲ್ಲಿ ಮೀರತ್ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹದ ತುಂಡುಗಳನ್ನು ಸಿಮೆಂಟ್ ತುಂಬಿದ ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೃತನ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ನ್ಯಾಯಾಲಯ ಗಲ್ಲು ಶಿಕ್ಷೆ (ಮರಣದಂಡನೆ) ವಿಧಿಸಿದೆ.
ಬುಧವಾರ ನಡೆದ ನ್ಯಾಯಾಲಯ ಕಲಾಪದ ವೇಳೆ ಇಬ್ಬರೂ ಅಪರಾಧಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದು, ಅವರ ಕುಟುಂಬದ ಸದಸ್ಯರು ನ್ಯಾಯಾಲಯದ ಕೊಠಡಿಯಲ್ಲಿದ್ದರು.
13 ತಿಂಗಳು, 126 ವಿಚಾರಣೆಗಳ ಬಳಿಕ ಮಹತ್ವದ ತೀರ್ಪು
ಸುಮಾರು 13 ತಿಂಗಳುಗಳ ಕಾಲ ನಿರಂತರ ವಿಚಾರಣೆ ನಡೆಸಿದ ನ್ಯಾಯಾಲಯವು ಸೆಪ್ಟೆಂಬರ್ 30 ರಂದೇ ಇಬ್ಬರನ್ನೂ ದೋಷಿಗಳು ಎಂದು ತೀರ್ಮಾನಿಸಿತ್ತು. ಶಿಕ್ಷೆಯ ಪ್ರಮಾಣ ಕುರಿತ ವಾದ ಮಂಡನೆಗೆ ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿತ್ತು. ಕೃತ್ಯದ ಭೀಕರತೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಗರಿಷ್ಠ ಶಿಕ್ಷೆ ನೀಡುವಂತೆ ಪ್ರಾಸಿಕ್ಯೂಷನ್ ಬಲವಾಗಿ ವಾದಿಸಿತ್ತು.
ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಇಂತಹ ಘೋರ ಮತ್ತು ಅಮಾನವೀಯ ಅಪರಾಧಗಳನ್ನು ಎಸಗಿದವರಿಗೆ ತಕ್ಕುದಾದ ಕಠಿಣ ಶಿಕ್ಷೆಯೇ ಸೂಕ್ತ ಎಂಬ ಅಭಿಪ್ರಾಯದೊಂದಿಗೆ ಅಪರಾಧಿಗಳಿಗೆ ಮರಣದಂಡನೆ ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ: ಏನಿದು ‘ಬ್ಲೂ ಡ್ರಮ್’ ಹತ್ಯಾಕಾಂಡ?
2025ರ ಮಾರ್ಚ್ 4ರಂದು ಮೀರತ್‌ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನು ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಭೀಕರವಾಗಿ ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸೌರಭ್ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಅದರೊಳಗೆ ಸಿಮೆಂಟ್ ಸುರಿದು ಮುಚ್ಚಿಟ್ಟಿದ್ದರು.
ಮೀರತ್‌ನ ಬ್ರಹ್ಮಪುರಿ ಪ್ರದೇಶದಲ್ಲಿದ್ದ ದಂಪತಿಯ ಮನೆಯಲ್ಲಿ ಡ್ರಮ್ ಪತ್ತೆಯಾದ ಬೆನ್ನಲ್ಲೇ ಈ ಬರ್ಬರ ಕೃತ್ಯ ಬೆಳಕಿಗೆ ಬಂದಿತ್ತು. ಪೊಲೀಸರು ಇಬ್ಬರನ್ನೂ ಬಂಧಿಸಿ ತನಿಖೆ ಚುರುಕುಗೊಳಿಸಿದ್ದರು. ದೇಹವನ್ನು ವಿಲೇವಾರಿ ಮಾಡಲು ಬಳಸಿದ ನೀಲಿ ಡ್ರಮ್, ಈ ಪ್ರಕರಣದ ಪ್ರಮುಖ ಕೊಂಡಿಯಾಗಿದ್ದರಿಂದ ಇದು ‘ಬ್ಲೂ ಡ್ರಮ್ ಕೇಸ್’ ಎಂದೇ ಚರ್ಚೆಗೆ ಗ್ರಾಸವಾಗಿತ್ತು.
ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳು
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಒಟ್ಟು 22 ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಅಪರಾಧಕ್ಕೆ ಬಳಸಲಾದ ನೀಲಿ ಡ್ರಮ್, ಸಿಮೆಂಟ್, ಚಾಕು ಹಾಗೂ ಪಾತ್ರೆಗಳನ್ನು ಖರೀದಿಸಿದ್ದ ಅಂಗಡಿಗಳ ಮಾಲೀಕರು ಸಾಕ್ಷ್ಯ ನುಡಿದಿದ್ದರು. ಇದರ ಜೊತೆಗೆ, ಆರೋಪಿಗಳು ವಿವಿಧ ಸ್ಥಳಗಳಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್ ಮ್ಯಾನೇಜರ್‌ಗಳು, ದಾಖಲೆಗಳು ಹಾಗೂ ಆರೋಪಿಗಳನ್ನು ಕರೆದೊಯ್ದಿದ್ದ ಕ್ಯಾಬ್ ಚಾಲಕರ ಹೇಳಿಕೆಗಳನ್ನು ದಾಖಲಿಸಿಕೊಂಡು ಪ್ರಬಲ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.
ನ್ಯಾಯ ಸಿಕ್ಕಿತೆಂದ ಕುಟುಂಬ
ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದ ಮೃತ ಸೌರಭ್ ಅವರ ತಾಯಿ ರೇಣು ದೇವಿ ಹಾಗೂ ಸಹೋದರ ರಾಹುಲ್, ಆರೋಪಿಗಳಿಗೆ ಕಠಿಣ ಗಲ್ಲು ಶಿಕ್ಷೆಯೇ ಆಗಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಿದ್ದರು. ಇದೀಗ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಂತಾಗಿದೆ.