LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮರೆಯಾದ ಮಾನವೀಯತೆಗಿನ್ನೆಷ್ಟು ಬಲಿ?

 

 

ಮನಸ್ಸನ್ನು ಅರ್ಥಮಾಡಿಕೊಳ್ಳದ ಹೃದಯಗಳು ಇದ್ದೂ ಸತ್ತಂತೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ; ಹೆತ್ತವರನ್ನು ಮನೆಯಿಂದ ಹೊರಹಾಕುವ ಮುನ್ನ ನೆನಪಿರಲಿ, ನಮಗೂ ಒಂದು ವೃದ್ಧಾಪ್ಯ ಕಾದಿದೆ.
ಪ್ರತಿದಿನದಂತೆ ಅಂದೂ ಪತ್ರಿಕೆಯ ಶೀರ್ಷಿಕೆಗಳ ಕಡೆ ಗಮನಹರಿಸುತ್ತಿದ್ದೆ. ತಟ್ಟನೆ ಒಂದು ಸುದ್ದಿ ಕಣ್ಣಿಗೆ ಬಿತ್ತು. ಕೆಲವೊಮ್ಮೆ ಸುದ್ದಿ ಶೀರ್ಷಿಕೆಗಳು ಕಣ್ಣಿಗೆ ಬಿದ್ದರೂ, ಹೃದಯದೊಳಗೆ ಚುಚ್ಚಿ ಉಳಿಯುವಷ್ಟು ತೀವ್ರವಾಗಿರುತ್ತವೆ. ಇದು ಅಂಥದ್ದೇ ಒಂದು ಘಟನೆ. ಅಂಕಿ-ಅAಶಗಳಲ್ಲ, ತನಿಖಾ ವರದಿಗಳಲ್ಲ; ಮೌನವಾಗಿ ಕೂಗುವ ಮಾನವೀಯತೆಯ ಸೋಲಿನ ಕಥೆ. ಜನ್ಮ ನೀಡಿ, ತುತ್ತು ಅನ್ನ ಉಣಿಸಿ, ತಾನು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲಿ ಎಂದು ಬೆವರು ಸುರಿಸಿ ಆಸ್ತಿ ಮಾಡಿದ ಆ ತಂದೆ-ತಾಯಿಗೆ ಇಂದು ಸಿಕ್ಕ ಪ್ರತಿಫಲವೇನು? ಮರಣ. ಅದೂ ಹಸಿವಿನಿಂದ ಬೆಂದು, ಪ್ರೀತಿಯಿಲ್ಲದೆ ನೊಂದು ಕಂಡುಕೊAಡ ದಾರುಣ ಸಾವು.
ಅಂದೊಮ್ಮೆ ವಿದೇಶಿಗರು ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರ, ಮಾನವೀಯತೆಯನ್ನು ಮನಗಂಡು ಹೃದಯಪೂರ್ವಕವಾಗಿ ನಮಗೆ ಶರಣಾಗಿದ್ದರು. ಆದರೆ ಇಂದು ದಿನಪತ್ರಿಕೆಗಳಲ್ಲಿ ಬರುವ ಮನಕಲಕುವ ಸುದ್ದಿಗಳು ಅವರ ಕಿವಿ ತಲುಪಿದರೆ ನಮ್ಮ ದೇಶದ ಮೇಲಿನ ಗೌರವದ ಗತಿಯೇನು?
ಅವರು ಯಾರಿಗೂ ಅಪರಿಚಿತರಲ್ಲ. ನಮ್ಮ ಪಕ್ಕದ ಮನೆಯ ಅಪ್ಪ-ಅಮ್ಮನಂತೆಯೇ. ತಮ್ಮ ಯೌವನವನ್ನು ದುಡಿಮೆಗೆ ಅರ್ಪಿಸಿ, ಕನಸುಗಳನ್ನು ಮಕ್ಕಳ ಭವಿಷ್ಯಕ್ಕೆ ಬಲಿ ಕೊಟ್ಟವರು. “ಇದು ನಮ್ಮದು” ಎಂದು ಹೇಳಿಕೊಳ್ಳಲು ಒಂದು ತುಂಡು ಆಸ್ತಿ ಕಟ್ಟಿದರು; ಅದಕ್ಕಿಂತ ದೊಡ್ಡದಾಗಿ ಮಕ್ಕಳ ಜೀವನ ಕಟ್ಟಿದರು. ಬೆವರು, ಹಸಿವು, ನೋವು — ಎಲ್ಲವನ್ನೂ ನುಂಗಿ, ಮಕ್ಕಳ ನಗುವಿನಲ್ಲಿ ತಮ್ಮ ಬದುಕಿನ ಅರ್ಥ ಕಂಡವರು. ಆದರೆ ಕಾಲವು ಕ್ರೂರ. ವಯಸ್ಸು ಹೆಚ್ಚಾದಂತೆ ಅವರ ಮೌಲ್ಯ ಕಡಿಮೆಯಾದಂತೆ ನಡೆದುಕೊಂಡಿತು ಸಮಾಜ. ಮನೆಯೊಳಗಿನ ಮಾತುಗಳು ಕಡಿಮೆಯಾದವು, ಕಣ್ಣುಗಳಲ್ಲಿದ್ದ ಗೌರವ ಮಂಕಾಯಿತು. “ಇಲ್ಲಿ ಇರೋದು ಸರಿಯಲ್ಲ” ಎಂಬ ಮೌನ ಸೂಚನೆಗಳು ದಿನೇ ದಿನೇ ಗಟ್ಟಿಯಾದವು. ಕೊನೆಗೆ ವೃದ್ಧಾಶ್ರಮ.
ವೃದ್ಧಾಶ್ರಮ ಎಂದರೆ ಆಶ್ರಯ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಎಲ್ಲರಿಗೂ ಅದು ಮನೆ ಆಗುವುದಿಲ್ಲ. ಅಲ್ಲಿ ದೊರೆಯುವ ಊಟ ಹೊಟ್ಟೆ ತುಂಬಿಸಬಹುದು; ಆದರೆ ಆತ್ಮವನ್ನು ತುಂಬಿಸುವುದು ಮನೆಯ ಉಸಿರಷ್ಟೇ. ತಮ್ಮದೇ ಮಕ್ಕಳ ಕೈಯಿಂದ ನೀರು ಕುಡಿದ ನೆನಪು, ಸಂಜೆ ಹೊತ್ತು ಮಾತಾಡಿಕೊಂಡ ದಿನಗಳು ಇವುಗಳ ಮಧ್ಯೆ ವೃದ್ಧಾಶ್ರಮದ ಗೋಡೆಗಳು ಇನ್ನಷ್ಟು ಕಿರಿದಾಗುತ್ತವೆ. ಅವರಿಗೆ ಅಲ್ಲಿರುವುದು ಸಾಧ್ಯವಾಗಲಿಲ್ಲ. ಮನಸ್ಸು ಕುಗ್ಗಿ, ಆತ್ಮ ನಲುಗಿತು. “ನಮ್ಮ ಬದುಕಿಗೆ ಇಲ್ಲಿ ಜಾಗವಿಲ್ಲ” ಎಂಬ ಭಾವನೆ ಗಟ್ಟಿಯಾಗಿ ಬೇರುಬಿಟ್ಟಿತು. ಯಾರನ್ನೂ ದೂರಾಡದೆ, ಯಾರ ಮೇಲೂ ಕೋಪ ಹೊರಹಾಕದೆ, ಮೌನವಾಗಿ ಹೊರಟರು.
ಒಂದು ಸಾರಿಗೆ ಬಸ್. ಒಂದು ಬಸ್ ಸ್ಟ್ಯಾಂಡ್. ಅಲ್ಲಿ ಇಳಿದ ಕ್ಷಣದಿಂದಲೇ ಅವರು ಸಮಾಜದ ಕಣ್ಣಿಗೆ ಮತ್ತಷ್ಟು ಅಜ್ಞಾತರಾದರು. ಯಾರಿಗೂ ಗೊತ್ತಾಗದಂತೆ, ಯಾರೂ ಗಮನಿಸದಂತೆ, ತಮ್ಮ ಬದುಕಿನ ಕೊನೆಯ ನಿರ್ಧಾರವನ್ನು ತೆಗೆದುಕೊಂಡರು. ಅದು ಒಂದು ಕ್ಷಣದ ತೀರ್ಮಾನವಾಗಿರಲಿಲ್ಲ ಹಲವು ವರ್ಷಗಳ ನಿರ್ಲಕ್ಷ್ಯ, ತಿಂಗಳ ಮೌನ, ದಿನಗಳ ಅವಮಾನ ಒಟ್ಟಾಗಿ ಒತ್ತಿದ ಭಾರ.
ರೈಲೇನೋ ಬಂತು. ಬದುಕು ನಿಂತಿತು : ಈ ಘಟನೆಯಲ್ಲಿ ತಪ್ಪು ಯಾರದು ಎಂದು ಕೇಳುವುದು ಸುಲಭ. ಮಕ್ಕಳದು? ಸಮಾಜದದು? ವ್ಯವಸ್ಥೆಯದು? ಆದರೆ ನಿಜವಾದ ಪ್ರಶ್ನೆ ಇನ್ನೊಂದು: ನಾವು ಯಾವಾಗ ನಮ್ಮ ಅಪ್ಪ-ಅಮ್ಮರನ್ನು “ಜವಾಬ್ದಾರಿ”ಯಿಂದ “ಭಾರ”ವನ್ನಾಗಿ ಮಾಡಿದೆವು? ವೃದ್ಧಾಪ್ಯವು ರೋಗವಲ್ಲ. ಅದು ಬದುಕಿನ ಸಹಜ ಹಂತ. ಇಂದು ನಮ್ಮನ್ನು ಬೆತ್ತಲಾದ ಕಾಲುಗಳಲ್ಲಿ ಶಾಲೆಗೆ ಕರೆದುಕೊಂಡು ಹೋದ ಕೈಗಳು, ನಾಳೆ ನಡುಗಬಹುದು. ಆಗ ಅವರಿಗೆ ಬೇಕಾಗುವುದು ಐಶ್ವರ್ಯವಲ್ಲ ಒಂದು ಮಾತು, ಒಂದು ಸ್ಪರ್ಶ, “ನೀವಿದ್ದೀರಿ” ಎಂಬ ಭರವಸೆ. ಮಾನವೀಯತೆ ದೊಡ್ಡ ಘೋಷಣೆಗಳಲ್ಲಿ ಇಲ್ಲ. ಅದು ಬೆಳಗಿನ ಚಹಾದ ಕಪ್ಪಿನಲ್ಲಿ, ಸಂಜೆ ಕೇಳುವ “ಹೇಗಿದ್ದೀರಿ?” ಎಂಬ ಪ್ರಶ್ನೆಯಲ್ಲಿ, ಹಬ್ಬದ ದಿನ ಕರೆ ಮಾಡುವ ಒಂದು ನಿಮಿಷದಲ್ಲಿ ಅಡಗಿದೆ. ನಾವು ಅವನ್ನು ಕಳೆದುಕೊಂಡಾಗಲೇ ಇಂಥ ದಾರುಣ ಸುದ್ದಿಗಳು ಹುಟ್ಟುತ್ತವೆ.
ಬಾಲ್ಯದಲ್ಲಿ ಮಕ್ಕಳು ಅಂಬೆಗಾಲಿಡುವಾಗ ಬಿದ್ದರೆ ಅಪ್ಪನ ಎದೆ ಜಲ್ಲೆನ್ನುತ್ತಿತ್ತು, ಮಗು ಅತ್ತರೆ ಅಮ್ಮನ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತವರನ್ನೇ "ಅನಾಥರನ್ನಾಗಿ" ಮಾಡುವುದು ಈ ಕಾಲದ ದೊಡ್ಡ ದುರಂತ. ಯಜಮಾನನಂತೆ ದುಡಿದು, ಕಷ್ಟಪಟ್ಟು ಮನೆ ಕಟ್ಟಿ ಸಾಕಿ ಸಲಹಿದ ಆ ದಂಪತಿಗೆ ಕೊನೆಗಾಲದಲ್ಲಿ ಸ್ವಂತ ಮನೆಯೇ ಪರಕೀಯವಾಯಿತು.
ಈ ದಂಪತಿ ನಮ್ಮನ್ನು ಏನೋ ಕೇಳಿಕೊಂಡು ಹೋಗಿಲ್ಲ. ಅವರು ಮೌನವಾಗಿ ಒಂದು ಪ್ರಶ್ನೆಯನ್ನು ಮಾತ್ರ ಬಿಟ್ಟುಹೋದರು: “ನಮ್ಮ ಬದುಕು ಮುಗಿದ ಮೇಲೆ ಮಾತ್ರವೇ ನಿಮಗೆ ನಮ್ಮ ಮೌಲ್ಯ ಗೊತ್ತಾಗಬೇಕೇ?” ಇದು ಅವರ ಕಥೆಯಷ್ಟೇ ಅಲ್ಲ. ಇದು ನಮ್ಮೆಲ್ಲರ ಕನ್ನಡಿ. ಆ ಕನ್ನಡಿಯಲ್ಲಿ ನಾವು ನಮ್ಮ ಮುಖವನ್ನು ನೋಡಿಕೊಳ್ಳುವ ಧೈರ್ಯ ಹೊಂದಿದ್ದೇವೆಯೇ?
ಸಮಾಜಕ್ಕೆ ಕೆಲವು ಕಹಿಯಾದ ಪ್ರಶ್ನೆಗಳು : ಈ ಘಟನೆ ಕೇವಲ ಒಂದು ಆತ್ಮಹತ್ಯೆಯಲ್ಲ, ಇದು ಸಮಾಜದ ಸಾಮೂಹಿಕ ನೈತಿಕತೆಯ ಪತನ. ನಾವು ಎತ್ತ ಸಾಗುತ್ತಿದ್ದೇವೆ?
 ಆಸ್ತಿ ಮುಖ್ಯವೋ, ಅಪ್ಪ-ಅಮ್ಮ ಮುಖ್ಯವೋ? ಆಸ್ತಿ ಹಂಚಿಕೊಳ್ಳುವ ಗಡಿಬಿಡಿಯಲ್ಲಿ ಹೆತ್ತವರ ಪ್ರೀತಿಯನ್ನು ಹಂಚಿಕೊಳ್ಳಲು ನಮಗೇಕೆ ಮನಸ್ಸಿಲ್ಲ?
 ಮಾನವೀಯತೆ ಎಲ್ಲಿ ಅಡಗಿದೆ? ಬಸ್ ಸ್ಟ್ಯಾಂಡ್ನಲ್ಲಿ ಹಸಿದು ಕುಳಿತಿದ್ದ ಆ ದಂಪತಿಯ ಕಣ್ಣೀರನ್ನು ಗುರುತಿಸುವ ಕಣ್ಣುಗಳು ನಮಗಿಲ್ಲವೇ?
 ವೃದ್ಧಾಶ್ರಮಗಳೇ ಪರಿಹಾರವೇ? ಬದುಕಿನ ಸಂಜೆಗಾಲದಲ್ಲಿ ಬೇಕಿರುವುದು ನಾಲ್ಕು ಗೋಡೆಗಳ ಆಶ್ರಯವಲ್ಲ, ಬದಲಿಗೆ ಮೊಮ್ಮಕ್ಕಳ ಆಟ ಮತ್ತು ಮಕ್ಕಳ ಪ್ರೀತಿಯ ಸಲುಗೆ.
"ಹೆತ್ತವರನ್ನು ಕಳೆದುಕೊಂಡ ಮೇಲೆ ದೇವಸ್ಥಾನದಲ್ಲಿ ಕಲ್ಲು ದೇವರಿಗೆ ಪೂಜೆ ಮಾಡುವುದಕ್ಕಿಂತ, ಅವರು ಬದುಕಿದ್ದಾಗ ಒಂದು ತುತ್ತು ಅನ್ನ ನೀಡಿ ಪ್ರೀತಿಯಿಂದ ನೋಡಿಕೊಳ್ಳುವುದೇ ನಿಜವಾದ ಧರ್ಮ." ರೈಲ್ವೆ ಹಳಿಗಳ ಮೇಲೆ ಅನಾಥವಾಗಿ ಬಿದ್ದ ಆ ಶವಗಳು ಕೇವಲ ದಂಪತಿಗಳದ್ದಲ್ಲ, ಅವು ಇಂದಿನ ಸಮಾಜದ ಮೃತಪಟ್ಟ "ಮಾನವೀಯತೆ"ಯ ಸಂಕೇತಗಳು. ಹಡೆದವರಿಗೆ ಅನ್ನ ನೀಡದ ಕೈಗಳು, ಅವರ ಮನಸ್ಸನ್ನು ಅರ್ಥಮಾಡಿಕೊಳ್ಳದ ಹೃದಯಗಳು ಇದ್ದೂ ಸತ್ತಂತೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ; ಹೆತ್ತವರನ್ನು ಮನೆಯಿಂದ ಹೊರಹಾಕುವ ಮುನ್ನ ನೆನಪಿರಲಿ, ನಮಗೂ ಒಂದು ವೃದ್ಧಾಪ್ಯ ಕಾದಿದೆ.

ಡಾ. ಪ್ರಸನ್ನ ದೇವರ ಮಠ ಅನಿಲಕುಮಾರ್, ಮಾಗಳ
ಪದವೀಧರ ಪ್ರಾಥಮಿಕ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದೇನೂರು,
ಹೂವಿನಹಡಗಲಿ, ವಿಜಯನಗರ ಜಿಲ್ಲೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು