ಸಿರುಗುಪ್ಪ, ಫೆ.14: ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ಸಿರುಗುಪ್ಪ ಘಟಕದ ವತಿಯಿಂದ ದೇಶನೂರಿನ ಸದಾಶಿವ ರೆಡ್ಡಿ ಪ್ರೌಢಶಾಲೆಯಲ್ಲಿ ಶನಿವಾರ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. “ನಮ್ಮ ಜೀವನದಲ್ಲಿ ತಾಯಿಯ ಪಾತ್ರ” ವಿಷಯದ ಕುರಿತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರುದ್ರವೇಣಿ ಉಪನ್ಯಾಸ ನೀಡಿದರು.
ಮೌಲ್ಯಗಳು, ಸಂಸ್ಕಾರಗಳು, ಸಹನೆ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ತಾಯಿಯ ಪಾತ್ರ ನಿರ್ಣಾಯಕವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಮಾನಸಿಕ ಸಮತೋಲನ ಕಾಪಾಡಲು ತಾಯಿಯ ಮಾರ್ಗದರ್ಶನ ಅಗತ್ಯವೆಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಉಪನ್ಯಾಸಕರಾದ ಶ್ರೀ ಶಿವಕುಮಾರ್ ಬಳಿಗಾರ್, ಕನ್ನಡ ಸಾಹಿತ್ಯ ಮತ್ತು ಜೀವನ ಮೌಲ್ಯಗಳ ನಡುವೆ ಆಳವಾದ ಸಂಬಂಧವಿದ್ದು, ಇಂತಹ ದತ್ತಿ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ ಹಾಗೂ ಮಾನವೀಯ ದೃಷ್ಟಿಕೋನವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷರಾದ ಡಾ. ಮಧುಸೂದನ ಕಾರಿಗನೂರು, ಸ್ವಾರ್ಥಪರ ಭಾವನೆಗಳಿಂದ ಮಸುಕಾದ ಇಂದಿನ ಸಮಾಜದಲ್ಲಿ ಭಾವೈಕ್ಯತೆಗೆ ತಾಯಿಭಾವವೇ ಆಧಾರ ಎಂದು ತಿಳಿಸಿದರು. ಪರಿಷತ್ತು ಮೌಲ್ಯಾಧಾರಿತ ವಿಚಾರಗಳನ್ನು ಜನಸಾಮಾನ್ಯರೊಳಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ಕುಮಾರಗೌಡ, ಶಾಲೆಗಳು ಪಾಠ ಬೋಧನೆಯ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗಬೇಕು. ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತವೆ ಎಂದು ಹೇಳಿದರು.
ದತ್ತಿ ದಾನಿಗಳಾದ ಶ್ರೀಮತಿ ಅರಳಿಬಸಮ್ಮ, ಶ್ರೀ ಅರಳಿ ಮಲ್ಲಿಕಾರ್ಜುನ ಮತ್ತು ಸಹೋದರರು ಶಿಕ್ಷಣ ಹಾಗೂ ಸಾಹಿತ್ಯ ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿ, ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ಶಿಕ್ಷಕರಾದ ಶ್ರೀ ನಾಗರಾಜ್ ನಿರೂಪಣೆ ನಡೆಸಿದರು. ಶ್ರೀ ನಾಗನಗೌಡ ಸ್ವಾಗತಿಸಿ, ಶ್ರೀಮತಿ ಈಶ್ವರಮ್ಮ ವಂದಿಸಿದರು. ಕಸಾಪ ಕಾರ್ಯದರ್ಶಿಗಳಾದ ಶ್ರೀ ಗಜೇಂದ್ರ, ಸಿಆರ್ಪಿಗಳಾದ ಶ್ರೀ ವಿಜಯ್ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.