ಬೆಳಗಾವಿ ; ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಷಟಸ್ಥಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಅದರಿಂದ ಮಾತ್ರ ಭವ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಅರಭಾವಿ ಕಡೋಲಿಯ ಜಗದ್ಗುರು ದುರದುಂಡೇಶ್ವರ ಸಿದ್ದ ಸಂಸ್ಥಾನ ಮಠದ ಶ್ರೀ ಗುರುಬಸವ ಲಿಂಗ ಮಹಾಸ್ವಾಮಿಗಳು ನುಡಿದರು.
ಅವರಿಂದು ಬೆಳಗಾವಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವಕ್ಕೆ ಷಟಸ್ಥಲ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ನೀಡಿ ಆಶೀರ್ವಚನ ನೀಡುತ್ತಿದ್ದರು.
ಮಾನವ ಜನ್ಮವೇ ದೊಡ್ಡ ಸಂಪತ್ತು ಷಟಸ್ಥಲದ 6 ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದಿದ್ದೆ ಆದರೆ ಜೀವನ ಪಾವನವಾಗುತ್ತದೆ. ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಷಟಸ್ಥಲ ಮಾರ್ಗವನ್ನು ಅನುಸರಿಸಿ ದೀನ ದಲಿತ ಬಡ ಭಕ್ತರನ್ನು ಸಮಾನವಾಗಿ ತಮ್ಮಂತೆ ಕಂಡು ಅವರ ಉದ್ಧಾರಕ್ಕೆ ಕಾರಣವಾದರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದರು. ಅದೇ ಮಾರ್ಗದಲ್ಲಿ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರು ಮತ್ತು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಡೆದುಕೊಂಡು ಶ್ರೀಮಠದಲ್ಲಿ ಅಧ್ಯಾತ್ಮದ ಚಿಂತನೆ ಸದಾ ಕಾಲ ಉಳಿಯುವಂತೆ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತಾರೆ ಎಂದರು.
ಬೆಳಗಾವಿ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮಿಗಳು,, ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶೇಗುಣಸಶಿಯ ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು, ಕಾರಂಜಿ ಮಠದ ಡಾ. ಶಿವಯೋಗಿ ದೇವರು ಸೇರಿದಂತೆ ಹಲವಾರು ಮಠಾಧೀಶರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ್, ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜಶೇಖರ್ ಪಾಟೀಲ್ ಸ್ವಾಗತಿಸಿದರು, ಎ.ಕೆ. ಪಾಟೀಲ್ ವಂದಿಸಿದರು