ನವದೆಹಲಿ: ಮಾರಕ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಯುವ ಚಾಲಕರಿಗೆ ರಾತ್ರಿ ವೇಳೆ ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ನಿರ್ಬಂಧ ಹಾಗೂ ಹಿರಿಯ ನಾಗರಿಕರಿಗೆ ಕಡ್ಡಾಯ ದೃಷ್ಟಿ ತಪಾಸಣೆ ಸೇರಿದಂತೆ ಹಲವು ಹೊಸ ನಿಬಂಧನೆಗಳು ಜಾರಿಗೆ ಬರುತ್ತಿವೆ.
ಉತ್ತರ ಐರ್ಲೆಂಡ್‌ನಲ್ಲಿ ನೂತನ ನಿಯಮ ಜಾರಿ
ಯುನೈಟೆಡ್ ಕಿಂಗ್‌ಡಮ್‌ನಲ್ಲೇ ಮೊದಲ ಬಾರಿಗೆ ಉತ್ತರ ಐರ್ಲೆಂಡ್‌ನಲ್ಲಿ ನೂತನ 'ಗ್ರಾಜುಯೇಟೆಡ್ ಡ್ರೈವರ್ ಲೈಸೆನ್ಸಿಂಗ್' (GDL) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ 17 ರಿಂದ 23 ವರ್ಷದೊಳಗಿನ ಯುವಕರನ್ನು ಗುರಿಯಾಗಿಸಿಕೊಂಡು ಈ ನಿಯಮಗಳನ್ನು ರೂಪಿಸಲಾಗಿದೆ. ಹೊಸ ನಿಯಮದ ಪ್ರಕಾರ, ಕಲಿಯುವವರು (Learners) ಪ್ರಾಯೋಗಿಕ ಚಾಲನಾ ಪರೀಕ್ಷೆಗೆ ಹಾಜರಾಗುವ ಮುನ್ನ ಕನಿಷ್ಠ ಆರು ತಿಂಗಳ ಕಾಲ ಚಾಲನಾ ತರಬೇತಿ ಹಾಗೂ ಅನುಭವ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ 24 ವರ್ಷದೊಳಗಿನ ಹೊಸ ಚಾಲಕರು ರಾತ್ರಿ ವೇಳೆ ಯುವ ಪ್ರಯಾಣಿಕರನ್ನು ವಾಹನದಲ್ಲಿ ಕರೆದೊಯ್ಯುವುದಕ್ಕೆ ಕಠಿಣ ನಿರ್ಬಂಧ ವಿಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ 3 ಪೆನಾಲ್ಟಿ ಪಾಯಿಂಟ್‌ಗಳು ಅಥವಾ £1,000 ವರೆಗೆ ದಂಡ ವಿಧಿಸಲಾಗುತ್ತದೆ.
ಯುವ ಚಾಲಕರ ಅಪಘಾತಗಳ ಆತಂಕಕಾರಿ ಅಂಕಿ-ಅಂಶ
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಒಟ್ಟು ಪರವಾನಗಿ ಹೊಂದಿರುವವರಲ್ಲಿ 17 ರಿಂದ 23 ವರ್ಷ ವಯಸ್ಸಿನವರು ಕೇವಲ ಶೇ. 8 ರಷ್ಟಿದ್ದರೂ, 2024 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸರಿಸುಮಾರು ಕಾಲು ಭಾಗದಷ್ಟು (ಶೇ. 25) ಅಪಘಾತಗಳಿಗೆ ಇವರೇ ಕಾರಣವಾಗಿದ್ದಾರೆ. ಇಂತಹ ಅಪಘಾತಗಳಲ್ಲಿ 251 ಜನರು ಸಾವನ್ನಪ್ಪಿದ್ದು ಅಥವಾ ಗಂಭೀರವಾಗಿ ಗಾಯಗೊಂಡಿದ್ದು, ಶೇ. 65 ರಷ್ಟು ಪ್ರಕರಣಗಳಲ್ಲಿ ಯುವ ಚಾಲಕರ ತಪ್ಪೇ ಇರುವುದು ಪತ್ತೆಯಾಗಿದೆ.
2002ರ ನಂತರ ಜನಿಸಿದವರಿಗೆ ಕಠಿಣ ನಿಯಮಗಳ ಪ್ರಸ್ತಾಪ
ರಸ್ತೆ ಸುರಕ್ಷತಾ ಕಾರ್ಯತಂತ್ರದ ಭಾಗವಾಗಿ, 2002 ರ ನಂತರ ಜನಿಸಿದ ಚಾಲಕರಿಗೆ ಮತ್ತಷ್ಟು ಬಿಗಿಯಾದ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಥಿಯರಿ ಪರೀಕ್ಷೆ ಹಾಗೂ ಪ್ರಾಕ್ಟಿಕಲ್ ಡ್ರೈವಿಂಗ್ ಪರೀಕ್ಷೆಯ ನಡುವೆ ಕನಿಷ್ಠ 6 ತಿಂಗಳ ಕಡ್ಡಾಯ ಕಲಿಕಾ ಅವಧಿಯನ್ನು (Minimum learning period) ನಿಗದಿಪಡಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ. ಇತರ ದೇಶಗಳ ಮಾದರಿಯನ್ನು ಗಮನಿಸಿದರೆ, ಇಂತಹ ಕನಿಷ್ಠ ಕಲಿಕಾ ಅವಧಿಯಿಂದ ಮಾರಕ ಅಪಘಾತಗಳನ್ನು ಶೇ. 32 ರಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
70 ದಾಟಿದ ಹಿರಿಯ ಚಾಲಕರಿಗೆ ಕಡ್ಡಾಯ ಕಣ್ಣಿನ ತಪಾಸಣೆ
ಹಿರಿಯ ನಾಗರಿಕರ ರಸ್ತೆ ಸುರಕ್ಷತೆಗೂ ಸರ್ಕಾರ ಹೊಸ ನಿಯಮ ರೂಪಿಸುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ, 70 ವರ್ಷ ದಾಟಿದವರು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಲೈಸೆನ್ಸ್ ನವೀಕರಿಸುವಾಗ ಸ್ವಯಂ-ಘೋಷಣೆ (Self-declaration) ಮೂಲಕ ತಮ್ಮ ದೃಷ್ಟಿ ಸಮರ್ಪಕವಾಗಿದೆ ಎಂದು ತಿಳಿಸಿದರೆ ಸಾಕಾಗುತ್ತಿತ್ತು. ಆದರೆ ಹೊಸ ಪ್ರಸ್ತಾವನೆಯ ಪ್ರಕಾರ, ಇನ್ನು ಮುಂದೆ ಕೇವಲ ಸ್ವಯಂ-ಘೋಷಣೆ ಸಾಲುವುದಿಲ್ಲ. ಬದಲಾಗಿ, ಪರವಾನಗಿ ನವೀಕರಿಸಲು ಪ್ರತಿ ಮೂರು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಅಧಿಕೃತ ಕಣ್ಣಿನ ತಪಾಸಣೆ ಮಾಡಿಸಿ ವರದಿ ಸಲ್ಲಿಸಬೇಕಾಗುತ್ತದೆ.