ದಾವಣಗೆರೆ, ಮಾ.25: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಪೆಟ್ರೂಲ್ ಮತ್ತು ಡಿಸೇಲ್ ಕೊರತೆಯಾಗಲಿದೆ ಎಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಮತ್ತು ಅನಗತ್ಯವಾಗಿ ಬುಕಿಂಗ್ ಮಾಡಬಾರದು, ಅಗತ್ಯವಿರುವಷ್ಟು ಗ್ಯಾಸ್ ಸಿಲಿಂಡರ್ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಘೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9,427 ಸಿಲಿಂಡರ್‌ಗಳು ವಿತರಣೆಯಾಗುತ್ತಿವೆ. ವಾರಕ್ಕೆ ಮೊದಲು ಬುಕಿಂಗ್ ಸಂಖ್ಯೆ ಸಾಮಾನ್ಯವಾಗಿದ್ದರೂ, ವದಂತಿಗಳ ನಂತರ ಇದು ಐದು ಪಟ್ಟು ಹೆಚ್ಚಾಗಿ 46,355 ಕ್ಕೆ ಏರಿದೆ. ಇದು ಕೇವಲ ಜನರ ಆತಂಕದಿಂದ ಸೃಷ್ಟಿಯಾಗಿರುವ ಸಮಸ್ಯೆಯೇ ಹೊರತು ಗ್ಯಾಸ್ ಕೊರತೆಯಿಂದಲ್ಲ ಎಂದು ತಿಳಿಸಿದರು.
ಮುಂದಿನ 4-5 ದಿನಗಳಲ್ಲಿ ಎಲ್ಲಾ ಗ್ಯಾಸ್ ಸಿಲಿಂಡರ್ ಬುಕಿಂಗ್‌ಗಳನ್ನು ಸರಬರಾಜು ಮಾಡಲಾಗುವುದು ಮತ್ತು ಗ್ಯಾಸ್ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲು ನಿಲ್ಲುವ ಅವಶ್ಯಕತೆಯಿಲ್ಲ, ಒಂದು ವೇಳೆ ಯಾರಾದರು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ನಿಂತು ಜನರಲ್ಲಿ ಆತಂಕ ಸೃಷ್ಠಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಸುಳ್ಳು ಸುದ್ದಿ ಹಬ್ಬಿಸುವುದು ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಡುಗೆ ಅನಿಲ (LPG) ಲಭ್ಯತೆ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಬುಕಿಂಗ್ ಮಾಡಿದ ಆರು ದಿನಗಳೊಳಗೆ ಸಿಲಿಂಡರ್ ಪೂರೈಕೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಮೇಲಿದ್ದ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದ್ದು, ಈಗ ಸುಲಭವಾಗಿ ಲಭ್ಯವಿದೆ.
ಹೊಸ ಬುಕಿಂಗ್ ನಿಯಮಗಳು:-
ಸರ್ಕಾರವು ಸಿಲಿಂಡರ್ ಬುಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ:
14.2 ಕೆ.ಜಿ ಗೃಹ ಬಳಕೆ ಸಿಲಿಂಡರ್: ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರು: 25 ದಿನಕ್ಕೊಮ್ಮೆ ಬುಕ್ ಮಾಡಬಹುದು. ಎರಡು ಸಿಲಿಂಡರ್ ಹೊಂದಿರುವವರು: 35 ದಿನಕ್ಕೊಮ್ಮೆ ಬುಕಿಂಗ್ ಮಾಡಲು ಅವಕಾಶವಿದೆ.
5 ಕೆಜಿ ಗೃಹ ಬಳಕೆ ಸಿಲಿಂಡರ್: ನಗರ ಪ್ರದೇಶದಲ್ಲಿ 9 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 16 ದಿನಕ್ಕೊಮ್ಮೆ ಅವಕಾಶ.
10 ಕೆಜಿ ಕಂಪೋಸಿಟ್ ಸಿಲಿಂಡರ್ : ನಗರ ಪ್ರದೇಶದಲ್ಲಿ 18 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 32 ದಿನಕ್ಕೊಮ್ಮೆ ಬುಕ್ ಮಾಡಬಹುದು.
ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆ:
ಜಿಲ್ಲೆಯ 220ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ದಾಸ್ತಾನು ಪೂರಕವಾಗಿದೆ. ವದಂತಿಗಳಿಂದಾಗಿ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುತ್ತಿರುವುದು ಕಂಡುಬಂದಿದ್ದು, ಇಂಧನ ಖಾಲಿಯಾಗುವ ಯಾವುದೇ ಭೀತಿ ಇಲ್ಲ, ಇನ್ನು ಐದು ತಿಂಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇರುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣು: ಎಫ್‌ಐಆರ್ ಎಚ್ಚರಿಕೆ
ಸಮಾಜದಲ್ಲಿ ಅಶಾಂತಿ ಮತ್ತು ಅಭದ್ರತೆ ಮೂಡಿಸುವ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. "ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ (FIR) ದಾಖಲಿಸಲಾಗುವುದು. ಪ್ರತಿಯೊಂದು ಪೋಸ್ಟ್ ಮೇಲೆ ನಮ್ಮ ಸೋಷಿಯಲ್ ಮೀಡಿಯಾ ವಿಂಗ್ ಕಣ್ಣಿಟ್ಟಿದೆ", ದೇಶದಾದ್ಯಂತ ಇಂದೇ ಆಮದು ನಿಂತರೂ ಸಹ ಮುಂದಿನ ನಾಲ್ಕರಿಂದ ಐದು ತಿಂಗಳವರೆಗೆ ಇಂಧನ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಪ್ರಧಾನ ಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಬಂಕ್‌ಗಳಿಗೆ ಸೂಚನೆ: ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನು ಅಥವಾ ಟ್ಯಾಂಕ್‌ಗಳ ಮೂಲಕ ಅನಗತ್ಯವಾಗಿ ಇಂಧನ ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ. ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳುವ ಅಗತ್ಯವಿಲ್ಲ. ಸಾರ್ವಜನಿಕರು ಕೇವಲ ಸರ್ಕಾರ ಮತ್ತು ತೈಲ ಕಂಪನಿಗಳ (BPCL, HPCL, IOCL) ಅಧಿಕೃತ ಹೇಳಿಕೆಗಳನ್ನು ಮಾತ್ರ ನಂಬಬೇಕು. ಸುಖಾಸುಮ್ಮನೆ ಆತಂಕಕ್ಕೆ ಒಳಗಾಗಿ ಇಂಧನ ಸಂಗ್ರಹ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬೈಯೋ ಗ್ಯಾಸ್ ಬಳಸಿ : ಸಾರ್ವಜನಿಕರು ಅಡುಗೆ ಅನಿಲದ ಬಳಕೆಯನ್ನು ಮಿತವಾಗಿ ಬಳಸಬೇಕು ಹಾಗೂ ಪರ್ಯಾಯ ಇಂಧನವಾಗಿ ಜೈವಿಕ ಅನಿಲ (ಬೈಯೋ ಗ್ಯಾಸ್) ಬಳಕೆಗೆ ಹೆಚ್ಚಿನ ಒತ್ತು ನೀಡಬೇ̧ಕು ಇತ್ತೀಚಿನ ದಿನಗಳಲ್ಲಿ ಇಂಧನದ ಬಳಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಸಿಲಿಂಡರ್ ಗ್ಯಾಸ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಾವಲಂಬಿಗಳಾಗಲು ಬೈಯೋ ಗ್ಯಾಸ್ ಘಟಕಗಳನ್ನು ಸ್ಥಾಪಿಸಿಕೊಳ್ಳುವುದು ಸೂಕ್ತವಾಗಿದೆ. ಈ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ಆರ್ಥಿಕ ಉಳಿತಾಯವನ್ನೂ ಮಾಡಬಹುದು. ಜೈವಿಕ ಅನಿಲ ಘಟಕಗಳನ್ನು ಅಳವಡಿಸಿಕೊಳ್ಳುವ ಆಸಕ್ತ ಗ್ರಾಹಕರಿಗೆ ಸರ್ಕಾರದ ವತಿಯಿಂದ ನಿಯಮಾನುಸಾರ ಸಹಾಯಧನ ಸೌಲಭ್ಯವೂ ಲಭ್ಯವಿರಲಿದೆ. ಇದರಿಂದ ಗ್ರಾಹಕರಿಗೆ ಆರಂಭಿಕ ವೆಚ್ಚದ ಹೊರೆ ತಗ್ಗಲಿದ್ದು, ದೀರ್ಘಕಾಲದವರೆಗೆ ಉಚಿತವಾಗಿ ಇಂಧನ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಕಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಇಂಧನ ಪೂರೈಕೆ ಕಂಪನಿಗಳ ನೊಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಲಕ್ಷಾಂತರ ನಗದು, ಮದ್ಯ ವಶ : ಡಾ.ಶೇಖರ್ ಹೆಚ್.ಟಿ
ದಾವಣಗೆರೆ, ಮಾ.25 (ಕರ್ನಾಟಕ ವಾರ್ತೆ): ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಅಕ್ರಮ ನಗದು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ರವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಘೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ನಗದು ವಶ: ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 1,12,000 ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.
ಅಕ್ರಮ ಮದ್ಯ ಜಪ್ತಿ: ಜಿಲ್ಲೆಯಲ್ಲಿ ಇದುವರೆಗೆ 7 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಮಾರು 22 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಚೆಕ್‌ಪೋಸ್ಟ್‌ಗಳ ಸಕ್ರಿಯತೆ: ಜಿಲ್ಲೆಯಲ್ಲಿ ಒಟ್ಟು 11 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, 8 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ವಿಧಾನಸಭಾ ಉಪ ಚುನಾವಣೆ: 10 ವಿಶೇಷ ಮತಗಟ್ಟೆಗಳ ಸ್ಥಾಪನೆ : ಸಿಇಒ
ದಾವಣಗೆರೆ, ಮಾ.25 (ಕರ್ನಾಟಕ ವಾರ್ತೆ): 107-ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 10 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗಾಗಿ 5 'ಸಖಿ' ಮತಗಟ್ಟೆಗಳು, 2 ಯುವ ಮತಗಟ್ಟೆಗಳು, 2 ಥೀಮ್ಯಾಟಿಕ್ (ಸಾಂಸ್ಕೃತಿಕ) ಮತಗಟ್ಟೆಗಳು ಮತ್ತು 1 ವಿಕಲಚೇತನ ಸ್ನೇಹಿ ಮತಗಟ್ಟೆ ಸೇರಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಾಕಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಘೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಮಹಿಳಾ ಮತದಾರರು ಹೆಚ್ಚು ಇರುವ ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಿ ಅಲ್ಲಿ ಮಹಿಳಾ ಅಧಿಕಾರಿ/ನೌಕರರನ್ನು ನಿಯೋಜಿಸಲಾಗುವುದು , ಥೀಮ್ಯಾಟಿಕ್ ಮತಟ್ಟೆಗಳಲ್ಲಿ ನಮ್ಮ ಸಂಸ್ಕೃತಿ ಕಲೆಗಳನ್ನು ಬಿಂಬಿಸುವಂತಹ ಮತಗಟ್ಟೆಗಳು, ಹೆಚ್ಚು ಯುವ ಮತದಾರರು ಇರುವ ಕಡೆ ಯುವ ಮತಗಟ್ಟೆ ಸ್ಥಾಪಿಸಿ ಅಲ್ಲಿ 18 ರಿಂದ 21 ವರ್ಷ ದೊಳಗಿನ ಅಧಿಕಾರಿ/ನೌಕರರನ್ನು ನಿಯೋಜಿಸಲಾಗುವುದು ಹಾಗೂ ವಿಕಲಚೇತನ ಸ್ನೇಹಿ ಮತಗಟ್ಟೆಯಲ್ಲಿ ವಿಕಲಚೇತನ ಅಧಿಕಾರಿ/ನೌಕರರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಸಿ-ವಿಜಿಲ್ (C-Vigil) ಆ್ಯಪ್: ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ತಕ್ಷಣ ದೂರು ನೀಡಲು 'ಸಿ-ವಿಜಿಲ್' ಆ್ಯಪ್ ಬಳಸಿ ಫೋಟೋ ಅಥವಾ ವಿಡಿಯೋ ಅಪ್‌ಲೋಡ್ ಮಾಡಿದ 24 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
‘ಸ್ವೀಪ್’ ಚಟುವಟಿಕೆ ಚುರುಕು :ಗಂಗಾಧರ ಸ್ವಾಮಿ
ದಾವಣಗೆರೆ, ಮಾರ್ಚ್ 25: ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗುವಂತೆ ಮಾಡುವ ನಿಟ್ಟಿನಲ್ಲಿ ಮತದಾರರ ಜಾಗೃತಿ (ಸ್ವೀಪ್) ಚಟುವಟಿಕೆಗಳನ್ನು ಅಧಿಕಾರಿಗಳು ಮತ್ತು ಸಾರ್ವಜನಿಕರು ಆಂದೋಲನದ ರೂಪದಲ್ಲಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸೈಕಲ್ ಜಾಥಾ ಕಾರ್ಯಕ್ರಮ ಉದ್ಪಾಟಿಸಿ ಮಾತನಾಡಿದರು.
ಏಪ್ರಿಲ್ 9 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನೆ ಮನೆಗೆ ತೆರಳಿ ಮನವೊಲಿಸುವ ಕೆಲಸವಾಗಬೇಕು. ಮತದಾನದ ಜಾಗೃತಿ ಕೇವಲ ಫೋಟೋ ಅಥವಾ ವಿಡಿಯೋಗ್ರಫಿಗೆ ಸೀಮಿತವಾಗಬಾರದು. ಅಧಿಕಾರಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಕಚೇರಿ ಕೆಲಸಗಳನ್ನು ಉತ್ಸಾಹದಿಂದ ಮಾಡಲು ಸಾಧ್ಯ. ಹೀಗಾಗಿ ಪ್ರತಿದಿನ ಬೆಳಿಗ್ಗೆ ವಾಕಿಂಗ್, ಜಾಗಿಂಗ್ ಅಥವಾ ಸೈಕ್ಲಿಂಗ್‌ನಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸೈಕಲ್ ಜಾಥಾ ಮಾರ್ಗ: ಹೈಸ್ಕೂಲ್ ಮೈದಾನದಿಂದ-ಗಡಿಯಾರ ಕಂಬ-BSC ಅಂಗಡಿ-ದುಗ್ಗಮ್ಮನ ದೇವಸ್ಥಾನ-ಹೊಂಡ ಸರ್ಕಲ್-ಜಾಲಿ ನಗರ- ಶಿವಾಜಿ ಸರ್ಕಲ್-ಕೋರ್ಟ್ ರಸ್ತೆ ಮೂಲಕ- ರೈಲ್ವೆ ನಿಲ್ದಾಣ.
ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಮಲ್ಲಾ ನಾಯಕ್, ಸೈಕಲ್ ಅಸೋಸಿಯೇಷನ್ ಸದಸ್ಯರು, ವೈದ್ಯರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾರಿಗೆ ಇಲಾಖೆ: ಶಿಬಿರಗಳ ಸ್ಥಳ ಮತ್ತು ಪರಿಷ್ಕೃತ ದಿನಾಂಕ
ದಾವಣಗೆರೆ ಮಾ.25 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ವಾಹನ 4.0 ತಂತ್ರಾಂಶದಲ್ಲಿ ತಪಾಸಣೆ ಒಳಪಡಿಸಲಾಗುವ ವಾಹನಗಳ ಜಿಯೋ ಟ್ಯಾಗಿಂಗ್ ವಿವರಗಳನ್ನು ದಾಖಲಿಸಬೇಕಾಗಿದ್ದು ಪ್ರತೀ ತಿಂಗಳ 4ನೇ ತಾರೀಖಿನಂದು ಮಲೇಬೆನ್ನೂರು ನೀರಾವರಿ ಇಲಾಖೆಯ ಸಬ್ ಡಿವಿಜನ್ ಕಚೇರಿ ಆವರಣ, ಪ್ರತೀ ತಿಂಗಳ 9ನೇ ತಾರೀಖಿನಂದು ಚನ್ನಗಿರಿ ಎ.ಪಿ.ಎಂ.ಸಿ ಆವರಣ, ಪ್ರತೀ ತಿಂಗಳ 15ನೇ ತಾರೀಖಿನಂದು ಹರಿಹರ ಎ.ಪಿ.ಎಂ.ಸಿ ಆವರಣ, ಪ್ರತೀ ತಿಂಗಳ 19ನೇ ತಾರೀಖಿನಂದು ಜಗಳೂರು ಎ.ಪಿ.ಎಂ.ಸಿ ಆವರಣ, ಪ್ರತೀ ತಿಂಗಳ 22ನೇ ತಾರೀಖಿನಂದು ಹೊನ್ನಾಳಿ ಎ.ಪಿ.ಎಂ.ಸಿ ಆವರಣ, ಪ್ರತೀ ತಿಂಗಳ 26ನೇ ತಾರೀಖಿನಂದು ನ್ಯಾಮತಿ ಎ.ಪಿ.ಎಂ.ಸಿ ಆವರಣದಲ್ಲಿ ನಡೆಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿನಾರಾಯಣ.ಪಿ.ನಾಯಕ್ ತಿಳಿಸಿದ್ದಾರೆ.