ಪಾಕಿಸ್ತಾನದ ನೈಋತ್ಯ ಭಾಗದಲ್ಲಿ ಸಂಭವಿಸಿದ ವಾಯುಯಾನ ದುರಂತವೊಂದರಲ್ಲಿ ಪಾಕಿಸ್ತಾನಿ ಸೇನೆಯ ತರಬೇತಿ ವಿಮಾನವು ಕುಸಿದುಬಿದ್ದು, ಇಬ್ಬರು ಪ್ರಮುಖ ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಲುಚಿಸ್ಥಾನ್ ಪ್ರಾಂತ್ಯದ ನವಾನ್ ಕಿಲ್ಲಿ ಪಟ್ಟಣದ ಬಳಿ ಸಂಭವಿಸಿದ ಈ ಭೀಕರ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಅಲ್ಲಿನ ಸೇನಾ ಇಲಾಖೆ ಸ್ಪಷ್ಟಪಡಿಸಿದೆ.
ಪಿಎಸಿ ಎಂಎಫ್‌ಐ-17 ಮುಶ್ಶಾಕ್ (PAC MFI-17 Mushshak) ಮಾದರಿಯ ಈ ತರಬೇತಿ ವಿಮಾನವು ಎಂದಿನಂತೆ ತನ್ನ ದಿನನಿತ್ಯದ ತರಬೇತಿ ಹಾರಾಟದಲ್ಲಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ವಿಮಾನದ ತರಬೇತುದಾರರಾಗಿದ್ದ ಮೇಜರ್ ಹುಸ್ನೈನ್ ಶೆಹಜಾದ್ ಹುಮಾಯೂನ್ ಹಾಗೂ ತರಬೇತಿ ಪಡೆಯುತ್ತಿದ್ದ ಕ್ಯಾಪ್ಟನ್ ಅಬ್ದುಲ್ ಸಮದ್ ಜೀವ ಕಳೆದುಕೊಂಡಿದ್ದಾರೆ. ಮಿಲಿಟರಿ ವಿಮಾನಗಳು ಮತ್ತು ತರಬೇತಿ ಜೆಟ್‌ಗಳು ತಾಂತ್ರಿಕ ದೋಷಗಳಿಂದಾಗಿ ಪತನಗೊಳ್ಳುತ್ತಿರುವುದು ಪಾಕಿಸ್ತಾನದಲ್ಲಿ ಮುಂದುವರಿದಿದ್ದು, ಈ ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೃತರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.