ನವದೆಹಲಿ, ಜನವರಿ 23 (ಪಿಟಿಐ): ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ, ಹೋರಾಟ ಮತ್ತು ಶಾಶ್ವತ ಪರಂಪರೆಯನ್ನು ಸ್ಮರಿಸುವ ಉದ್ದೇಶದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀ ವಿಜಯಪುರದಲ್ಲಿ ಪ್ರದರ್ಶನಗಳು, ಡ್ರೋನ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಪರಾಕ್ರಮ್ ದಿವಸ್ ಕಾರ್ಯಕ್ರಮಗಳು ಜನವರಿ 25 ರಂದು ಮುಕ್ತಾಯಗೊಳ್ಳಲಿದ್ದು, ಶ್ರೀ ವಿಜಯಪುರದ ಜೊತೆಗೆ ಬೋಸ್ ಅವರೊಂದಿಗೆ ಸಂಬಂಧ ಹೊಂದಿರುವ ದೇಶದಾದ್ಯಂತ 13 ಇತರ ಪ್ರಮುಖ ಸ್ಥಳಗಳಲ್ಲಿ ಆಚರಣೆಗಳು ನಡೆಯಲಿವೆ.
ಇಂದು ಶ್ರೀ ವಿಜಯಪುರದ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ (ನಿವೃತ್ತ) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಬೋಸ್ ನೀಡಿದ ಅಪಾರ ಕೊಡುಗೆ, ಅವರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಶಾಶ್ವತ ಪರಂಪರೆಯನ್ನು ಗೌರವಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಪ್ರಸಾರ ಮಾಡಲಾಗಿದ್ದು, ಮೂರು ದಿನಗಳ ಕಾಲ ಉಸ್ತಾದ್ ಅಮ್ಜದ್ ಅಲಿ ಖಾನ್, ಪಾಪನ್, ಅಮಾನ್ ಅಲಿ ಬಂಗಾಶ್, ಅಯಾನ್ ಅಲಿ ಬಂಗಾಶ್, ಮಂಗ್ಲಿ, ರಘು ದೀಕ್ಷಿತ್ ಮತ್ತು ಪ್ರತಿಭಾ ಸಿಂಗ್ ಬಘೇಲ್ ಅವರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಸೌರೇಂದ್ರ–ಸೌಮ್ಯಜಿತ್ ಅವರ ಡ್ರೋನ್ ಪ್ರದರ್ಶನವೂ ಆಕರ್ಷಣೆಯಾಗಲಿದೆ.
ನೇತಾಜಿ ಬೋಸ್ ಅವರ ಜೀವನಾಧಾರಿತ ವಿಶೇಷ ಪ್ರದರ್ಶನವನ್ನು ಐಟಿಎಫ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ನಾಳೆ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.