ಧಾರವಾಡ : ವಿಧಾನ ಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿರುವ ಮತಗಟ್ಟೆ ಬಳಿ ಈ ಗಲಾಟೆ ಸಂಭವಿಸಿದೆ.
ಮತಗಟ್ಟೆ ಬಳಿ ಹೊಡೆದಾಟ
ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದ ಸಂದರ್ಭದಲ್ಲಿ, ಮತಗಟ್ಟೆ ಆವರಣದಲ್ಲಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಸಣ್ಣ ವಿಷಯಕ್ಕೆ ಆರಂಭವಾದ ವಾಗ್ವಾದ ಕ್ಷಣಾರ್ಧದಲ್ಲೇ ತಾರಕಕ್ಕೇರಿತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಪರಸ್ಪರ ಆಕ್ರೋಶ ವ್ಯಕ್ತಪಡಿಸುತ್ತಾ ಏಕಾಏಕಿ ಕೈಕೈ ಮಿಲಾಯಿಸಿ ಹೊಡೆದಾಟಕ್ಕೆ ಮುಂದಾದರು. ಇದರಿಂದಾಗಿ ಮತದಾನ ಮಾಡಲು ಸಾಲಿನಲ್ಲಿ ನಿಂತಿದ್ದ ಪದವೀಧರ ಮತದಾರರು ಹಾಗೂ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಪೊಲೀಸರ ಸಕಾಲಿಕ ಮಧ್ಯಪ್ರವೇಶ: ಪರಿಸ್ಥಿತಿ ಶಾಂತ
ಜಗಳ ತೀವ್ರ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ರಂಗಪ್ರವೇಶ ಮಾಡಿದರು. ಎರಡೂ ಬಣಗಳನ್ನು ಚದುರಿಸಿ, ಜಗಳ ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸರ ಸಮಯಪ್ರಜ್ಞೆ ಹಾಗೂ ಸಕಾಲಿಕ ಮಧ್ಯಪ್ರವೇಶದಿಂದಾಗಿ ದೊಡ್ಡ ಮಟ್ಟದ ಅಹಿತಕರ ಘಟನೆ ತಪ್ಪಿದಂತಾಗಿದ್ದು, ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಘಟನೆಯ ಬಳಿಕ ಮತಗಟ್ಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮತದಾನ ಪ್ರಕ್ರಿಯೆ ಎಂದಿನಂತೆ ಶಾಂತಿಯುತವಾಗಿ ಮುಂದುವರಿದಿದೆ.