ವ್ಯಾಟಿಕನ್ ಸಿಟಿ / ರೋಮ್: ಕ್ಯಾಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಲಿಯೋ XIV (71) ಅವರಿಗೆ ಶ್ವಾಸಕೋಶದ ಕ್ಯಾನ್ಸರ್ (ಲಂಗ್ ಅಡೆನೊಕಾರ್ಸಿನೋಮ) ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರೋಮ್ನ ಆಗೊಸ್ಟಿನೊ ಜೆಮೆಲ್ಲಿ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಅಕ್ಟೋಬರ್ 13ರಂದು ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಅವರ ಬಲ ಶ್ವಾಸಕೋಶದ ಕೆಳಭಾಗದ ಹಾಳೆಯನ್ನು (lower lobe) ಹೊರತೆಗೆಯಲಾಗಿದೆ.
ಪೋಪ್ ಅವರು ತಮ್ಮ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡಿದವರಲ್ಲ. ಆದರೂ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿರುವುದು ಜನಸಾಮಾನ್ಯರಲ್ಲಿ ಹಾಗೂ ವೈದ್ಯಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಧೂಮಪಾನ ಮಾಡದವರಿಗೂ ಬರುತ್ತದೆ ಅಡೆನೊಕಾರ್ಸಿನೋಮ
ವೈದ್ಯಕೀಯ ತಜ್ಞರ ಪ್ರಕಾರ, 'ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್' (NSCLC) ಮಾದರಿಯಲ್ಲಿ ಅಡೆನೊಕಾರ್ಸಿನೋಮ ಅತ್ಯಂತ ಸಾಮಾನ್ಯವಾದದ್ದು. ಧೂಮಪಾನ ಮಾಡದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಧೂಮಪಾನವೇ ಶ್ವಾಸಕೋಶದ ಕ್ಯಾನ್ಸರ್ಗೆ ದೊಡ್ಡ ಕಾರಣವಾದರೂ, ಅದು ಏಕೈಕ ಕಾರಣವಲ್ಲ. ಶ್ವಾಸಕೋಶದ ಕೋಶಗಳಲ್ಲಿನ ಅನಿಯಂತ್ರಿತ ಬದಲಾವಣೆಗಳು, ಪರಿಸರ ಮಾಲಿನ್ಯ, ವಿಷಕಾರಿ ರಾಸಾಯನಿಕಗಳ ಸಂಪರ್ಕ ಸೇರಿದಂತೆ ಹಲವು ಅಂಶಗಳು ಈ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ. ಇನ್ನೂ ಕೆಲವರಲ್ಲಿ ಯಾವುದೇ ನಿರ್ದಿಷ್ಟ ಬಾಹ್ಯ ಕಾರಣಗಳಿಲ್ಲದೆಯೂ ಈ ರೋಗ ಕಾಣಿಸಿಕೊಳ್ಳಬಹುದು.
ತಜ್ಞರು ಏನಂತಾರೆ?
ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಹಿರಿಯ ಮೆಡಿಕಲ್ ಆಂಕಾಲಜಿಸ್ಟ್ ಡಾ. ಅಂಕಿತ್ ಜೈನ್ ಅವರ ಪ್ರಕಾರ, "ತಂಬಾಕು ಸೇವನೆ ಮಾಡದ ವ್ಯಕ್ತಿಗಳಲ್ಲೂ ಅನುವಂಶಿಕ ಹಾಗೂ ಜೀನ್ ರೂಪಾಂತರಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ. ದೇಹದಲ್ಲಿನ ಇಜಿಎಫ್ಆರ್ (EGFR) ಮತ್ತು ಎಎಲ್ಕೆ (ALK) ನಂತಹ ಜೀನ್ ರೂಪಾಂತರಗಳಿಂದಾಗಿ ತಂಬಾಕು ಅಥವಾ ಧೂಮಪಾನದ ಸಂಪರ್ಕವಿಲ್ಲದಿದ್ದರೂ ಶ್ವಾಸಕೋಶದ ಕೋಶಗಳು ಅತಿಯಾಗಿ ಬೆಳೆಯಲಾರಂಭಿಸಿ ಕ್ಯಾನ್ಸರ್ಗೆ ತಿರುಗುತ್ತವೆ" ಎಂದು ವಿವರಿಸಿದ್ದಾರೆ.
ಆರಂಭಿಕ ಹಂತದಲ್ಲೇ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದುಹಾಕಲಾಗಿರುವುದರಿಂದ ಪೋಪ್ ಲಿಯೋ XIV ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವ್ಯಾಟಿಕನ್ ತಿಳಿಸಿದೆ.