ಶಿವಮೊಗ್ಗ : ಹಾವು ಕಡಿತ ಉಂಟಾದ ತಕ್ಷಣ ಹತ್ತಿರದ ಪಿಹೆಚ್‌ಸಿ ಅಥವಾ ಯಾವುದೇ ಆಸ್ಪತ್ರೆಗೆ ತೆರಳಿ ಶೀಘ್ರ ಚಿಕಿತ್ಸೆ ಪಡೆಯಬೇಕು. ನಾಟಿ ವೈದ್ಯರ ಬಳಿ ತೆರಳಿ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು. ಹಾವು ಕಡಿತಕ್ಕೆ ನಾಟಿ ಔಷಧಿ ನೀಡುವ ನಾಟಿ ವೈದ್ಯರ ವಿರುದ್ದ ಸೂಕ್ತ ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿ ಅವರು ಮಾತನಾಡಿದರು.
ಡಿಎಸ್‌ಓ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 226 ಹಾವು ಕಡಿತದ ಪ್ರಕರಣಗಳಿದ್ದು 3 ಸಾವು ಸಂಭವಿಸಿದೆ. ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದರು.
ಹಾವು ಕಡಿತ ಆಡಿಟ್ ನಡೆಸಿದ ಎಡಿಸಿ, ಹಾವು ಕಡಿತ ಉಂಟಾದ ತಕ್ಷಣದಲ್ಲೇ ಆಸ್ಪತ್ರೆಗೆ ಕರೆತರಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ನೀಡುವ ಅಗತ್ಯ ಔಷಧಿ ಲಭ್ಯ ಇಟ್ಟುಕೊಳ್ಳಬೇಕು. ಹಾಗೂ ಮುನ್ನೆಚ್ಚರಿಕೆ ಹಾಗೂ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮನೆ ಸುತ್ತಮುತ್ತ ಸ್ವಚ್ಚತೆ ಕಾಪಾಡಕೊಳ್ಳಬೇಕು. ಹಾಗೂ ಶಾಲಾ ಆವರಣದಲ್ಲಿ ಅನಗತ್ಯ ಗಿಡ ಗಂಟೆಗಳನ್ನು ಸ್ವಚ್ಚಗೊಳಿಸಬೇಕು ಎಂದು ಸೂಚನೆ ನೀಡಿದರು. ಹಾಗೂ ಹಾವು ಕಡಿತಕ್ಕೆ ಯಾವುದೇ ಕಾರಣಕ್ಕೆ ನಾಟಿ ವೈದ್ಯರ ಬಳಿ ತೆರಳದೇ ತತ್‌ಕ್ಷಣ ಆಸ್ಪತ್ರೆಗೆ ರೋಗಿಯನ್ನು ಕರೆತರಬೇಕು. ಹಾವು ಕಡಿತಕ್ಕೆ ನಾಟಿ ಔಷಧಿ ನೀಡುವ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆರ್‌ಸಿಹೆಚ್ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಫ್ ಡಿ :
ಡಾ.ನಾಗರಾಜ್ ನಾಯ್ಕ್, ಜಿಲ್ಲೆಯಲ್ಲಿ ಈವರೆಗೆ ಕೆಎಫ್‌ಡಿ 123 ಪಾಸಿಟಿವ್ ಪ್ರಕರಣಗಳಿದು,್ದ ಚಿಕಿತ್ಸೆ ನಡೆಸಲಾಗುತ್ತಿದೆ. ಒಟ್ಟು 5 ಸಾವು ಸಂಭವಿಸಿದೆ. ಟಿಕ್ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು ಈವರೆಗೆ 625 ಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ ಅದರಲ್ಲಿ 3 ಟಿಕ್ ಪೂಲ್ ಪಾಸಿಟಿವ್ ಬಂದಿದೆ. ಈವರೆಗೆ 147 ಮಂಗಗಳು ಸಾವನ್ನಪ್ಪಿದ್ದು ಇದರಲ್ಲಿ 34 ಅಟಾಪ್ಸಿ ನಡೆಸಲಾಗಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿಗಳು, ಕೆಎಫ್‌ಡಿ ಗೆ ಕಾರಣವಾಗುವ ಉಣ್ಣೆ ಕಡಿತದಿಂದ ರಕ್ಷಣೆ ಪಡೆಯಲು ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ಡೇಪಾ ಎಣ್ಣೆಯನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ಇಲ್ಲಿನ ಮಕ್ಕಳು ಶಾಲೆಗೆ ಮತ್ತು ಹೊರಗೆ ಹೋಗುವಾಗ ಡೇಪಾ ಎಣ್ಣೆ, ಸಾಕ್ಸ್ ಧರಿಸಿಕೊಂಡು ಹೋಗಬೇಕು. ಜ್ವರ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಒಳಪಡಿಸಬೇಕು ಎಂದು ಎಚ್ಚರಿಕೆ ನೀಡಬೇಕು ಎಂದರು.
ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ:
ಜಿಲ್ಲೆಯಲ್ಲಿ ಈ ತಿಂಗಳು 2254 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಈವರೆಗೆ 8140 ನಾಯಿ ಕಡಿತ ಪ್ರಕರಣ ದಾಖಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ.
ನಾಯಿ ಕಡಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತçಚಿಕಿತ್ಸೆ ಮಾಡುವ ಪ್ರಕ್ರಿಯೆಯನ್ನು ಪರಿಣಾಮಕಾರಿಗೊಳಿಸಬೇಕು. ಹೋಟೆಲ್, ದರ್ಶಿನಿಗಳು ಛತ್ರಗಳು, ಶಾಲೆಗಳು, ಹಾಸ್ಟೆಲ್ ಗಳಲ್ಲಿ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಹಾಗೂ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಪದಾರ್ಥ ಹಾಕಬಾರದು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧಿ ದಾಸ್ತಾನು ಲಭ್ಯವಿರುವಂತೆ ಕ್ರಮ ವಹಿಸುವಂತೆ ಸೂಚಿಸಿದರು.
ಕಾಲರ, ಟೈಫಾಯ್ಡ್, ಟಿಬಿ, ಕ್ಷಯ ಇತರೆ ಹರಡುವ ಖಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಜಿಲ್ಲೆಯಲ್ಲಿ ಶುದ್ದ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಕ್ರಮ ವಹಿಸುವದನ್ನು ಖಾತ್ರಿಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್ ಲೈನ್ ಲೀಕೇಜ್ ಇದ್ರೆ ಗ್ರಾಮ ಪಂಚಾಯ್ತಿಗೆ ಮಾಹಿತಿ ನೀಡಬೇಕು. ಶಾಲೆಗಳು, ಹಾಸ್ಟೆಲ್‌ಗಳಲ್ಲಿ ನೀರಿನ ಮಾದರಿಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಈವರೆಗೆ 1682 ಪರೀಕ್ಷೆ ನಡೆದಿದ್ದು 42 ಪಾಸಿಟಿವ್ ಪ್ರಕರಣ ದಾಖಲಾಗಿ ಚಿಕಿತ್ಸೆ ನಡೆಯುತ್ತಿದೆ. ಮಲೇರಿಯಾ 5 ಪ್ರಕರಣ ದಾಖಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಹೆಚ್ಚಾಗುವ ಈಡಿಸ್ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಿ, ಡೆಂಗಿ ಜ್ವರ ಹರಡದಂತೆ ನಿಯಂತ್ರಿಸಲು ಕರ್ನಾಟಕ ಸರ್ಕಾರವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.