LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದಾಪುರದಲ್ಲಿ ರೇಡಿಯೋ ಕಾಲರ್ ಆನೆ ಖೆಡ್ಡಾಕ್ಕೆ

ಶಿವಮೊಗ್ಗ, ಜೂ.06 :  ಮೂರು ದಿನಗಳ ಹಿಂದೆ ಶಿವಮೊಗ್ಗ -ಕುಂದಾಪುರ ರಸ್ತೆಯ ಬಾಳೆಬರೆ ಘಾಟ್ ಇಳಿದು ಹೊಸಂಗಡಿ, ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಕೊನೆಗೂ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ.

ಆನೆಯನ್ನು ಹಿಡಿಯಲು 150 ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟರು. ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡದ ಜೊತೆಗೆ ಕುದುರೆಮುಖ ವನ್ಯಜೀವಿ ವಿಭಾಗ, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡವೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಮೊದಲು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕಾಡಾನೆಯನ್ನು ಆಗುಂಬೆ ಘಾಟ್ ಮೂಲಕ ಮೇಲಕ್ಕೆ ಹತ್ತಿಸಿ, ಅಲ್ಲಿಂದ ಕುದುರೆ ಮುಖ ಕಾಡಿಗೆ ಹೋಗುವಂತೆ ಮಾಡಿ ಆನಂತರ ಸಕಲೇಶಪುರ ಕಾಡಿಗೆ ಅಟ್ಟುವ ಯೋಚನೆ ಇತ್ತು. ಆದರೆ ಈ ಕಾಡಾನೆ ಕಾಡು ಬಿಟ್ಟು ರೋಡಿನ ಮೇಲೆಯೇ ಹೆಚ್ಚು ಓಡಾಡುತ್ತಿರುವುದು ಅರಣ್ಯ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆ ಉಂಟುಮಾಡಿತ್ತು. ಜೊತೆಗೆ ಘಾಟ್ ರಸ್ತೆಯಲ್ಲಿಯೇ ಕಾಡಾನೆಯನ್ನು ಘಟ್ಟದ ಮೇಲೆ ಹತ್ತಿಸುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಅಂತಿಮವಾಗಿ ಸೆರೆ ಹಿಡಿಯುವ ನಿರ್ಧಾರಕ್ಕೆ ಬರಲಾಗಿತ್ತು.

ಅದರಂತೆ ಅಧಿಕಾರಿಗಳು , ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು.  ಆನೆಯ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಐಡಿ ಮೂಲಕ ಅದರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಸಕ್ರೆಬೈಲು ಆನೆ ಬಿಡಾರದಿಂದ ಬಂದ ಮೂರು ಆನೆಗಳು, ನಾಗರಹೊಳೆಯ ಮೂರು ಆನೆಗಳು ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದವು.

ರೇಡಿಯೋ ಕಾಲರ್ ಮತ್ತು ಡ್ರೋನ್‌ನಿಂದಾಗಿ ಸಿದ್ದಾಪುರ ಗ್ರಾಮದ ಮತ್ತಿಬೇರು ಕಾಡಿನಲ್ಲಿ ಆನೆ ಪತ್ತೆಯಾಯಿತು. ಇದರ ಬೆನ್ನಲ್ಲೆ  ಸಕ್ರೆಬೈಲಿನ ಬಹದ್ದೂರು, ಬಾಲಚಂದ್ರ, ಸೋಮಣ್ಣ ಆನೆಗಳು, ಮಾವುತರು, ಕಾವಾಡಿಗರು, ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಕಾಡಿನೊಳಗೆ ಪ್ರವೇಶಿಸಿದ್ದರು. ಸಂಜೆ 5:30 ರ ವೇಳೆ  ಪಶುವೈದ್ಯರಾದ ಸಕ್ರೆಬೈಲಿನ ಡಾ|| ಕಲ್ಲಪ್ಪ, ಮಂಗಳೂರಿನ ಡಾ|| ಯಶಸ್ವಿ ಮತ್ತು ನಾಗರಹೊಳೆಯ ಡಾ|| ರಮೇಶ್ ಆನೆಗೆ ಅರೆವಳಿಕೆ ನೀಡಿದರು.  1.2  ಎಂ.ಎಲ್. ಅರಿವಳಿಕೆ ಡೋಸ್ ನೀಡಲಾಗಿತ್ತು. ಡೋಸ್ ಚುಚ್ಚಿಸಿಕೊಂಡ ಬಳಿಕವೂ ಕಾಡಾನೆ ಸುಮಾರು 1.5 ಕಿ.ಮೀ. ದೂರ ಕಾಡಿನಲ್ಲಿ ಸಾಗಿ 20 ನಿಮಿಷಗಳ ನಂತರ ಹೆನ್ನಾಬೈಲು ಸಮೀಪದ ಉರಪಾಲು ಬಳಿ  ಪಜ್ಞೆ ತಪ್ಪಿ ಬಿದ್ದತು.

ಆನಂತರ ನಾಗರಹೊಳೆಯಿಂದ ಆಗಮಿಸಿದ್ದ ದಸರ ಆನೆ ಭೀಮಾ, ಮಲಗಿದ್ದ ಕಾಡಾನೆಯನ್ನು ಎಬ್ಬಿಸಿ ನಿಲ್ಲಿಸಿದವು. ಇದಕ್ಕೆ  ಮಹೇಂದ್ರ ಮತ್ತು ಏಕಲವ್ಯ ಆನೆಗಳು ಕೂಡ ಸಹಕಾರ ನೀಡಿದವು. ಸಕ್ರೆಬೈಲ್‌ನ ಆನೆಗಳು ಕಾಡಾನೆಯನ್ನು ಲಾರಿಗೆ ಲೋಡ್ ಮಾಡಿದವು.  ಈ ಕಾಡಾನೆಯನ್ನು ಹಿಂದೊಮ್ಮೆ ಸೆರೆಹಿಡಿದು ಸುರಕ್ಷಿತ ಕಾಡಿಗೆ ಬಿಡಲಾಗಿತ್ತಾದರೂ, ಅದು ಪುನಃ ಜನವಸತಿ ಪ್ರದೇಶಗಳಿಗೆ ನುಗ್ಗಿ ತೊಂದರೆ ಕೊಡುತ್ತಿರುವುದರಿಂದ ಅದನ್ನು ಹಿಡಿಯುವುದಕ್ಕೆ ಅರಣ್ಯ  ಇಲಾಖೆ ಅವಕಾಶ ನೀಡಿತ್ತು.

ಕಾಡಾನೆಯನ್ನು ಹಿಡಿದ ಬಳಿಕ   ಸಕ್ರೆಬೈಲ್ ಆನೆ ಬಿಡಾರಕ್ಕೆ ರವಾನೆ ಮಾಡಲಾಗಿದೆ.  ಈ ಕಾಡಾನೆಯನ್ನು ಕೆಲವು ತಿಂಗಳ ಹಿಂದೆ ಸಕಲೇಶಪುರದಲ್ಲಿ ಹಿಡಿಯಲಾಗಿತ್ತು. ಅಲ್ಲಿಂದ  ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಲಕ್ಕವಳ್ಳಿ ವನ್ಯಜೀವಿ ವಿಭಾಗದಲ್ಲಿ ಇರದ ಆನೆಯು ಅಲ್ಲಿಂದ ತೀರ್ಥಹಳ್ಳಿಗೆ ಬಂದು ಆನಂತರ ರಸ್ತೆ ಮೂಲಕವೇ ಘಾಟ್ ಇಳಿದು ಸಿದ್ದಾಪುರದತ್ತ ತೆರಳಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST