Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

ಕ್ರೀಡಾಪಟುಗಳಿಗೆ ನೀಡುವ ಬಹುಮಾನ ಮೊತ್ತ ಮರುಪರಿಶೀಲನೆ : ಡಿಸಿಎಂ ಡಾ. ಜಿ. ಪರಮೇಶ್ವರ

ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು, ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂವಮ್ಮ ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆದರೆ ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ನಾನು ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ನಾಳೆ ಮುಖ್ಯಮಂತ್ರಿಗಳು ಹಾಗೂ ನಾನು ಸರ್ಕಾರದ ವತಿಯಿಂದ ಕ್ರೀಡಾಪಟುಗಳಿಗೆ ನೀಡಬೇಕಾದ ಬಹುಮಾನ ಮೊತ್ತದ ಕುರಿತು ಘೋಷಣೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿಯನ್ನೂ ತರಿಸಿಕೊಂಡಿದ್ದೇವೆ. ಅದನ್ನೆಲ್ಲ ಪರಿಶೀಲಿಸಿದ್ದೇವೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಎಷ್ಟು ಮಾಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಹೇಳಿದರು.

ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ : ಕೇಂದ್ರದ ಬರ ವೀಕ್ಷಣಾ ತಂಡದ ಪರಿಶೀಲನೆ ಕುರಿತು ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ ಎಂದು ತಿಳಿಸಿದರು.

ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ನಾವು ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳು ಮತ್ತು ನಾನು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಅವರಿಗೆ ಬ್ರೀಫ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಆ ಆಧಾರದ ಮೇಲೆ ಅವರು ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

ಕೆಲವು ಕಡೆ ಕೇಂದ್ರ ತಂಡದ ಸದಸ್ಯರು ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಗ್ರೌಂಡ್ ಟ್ರೂಥಿಂಗ್‌ನಲ್ಲಿ ಕಂಡುಬಂದ ಪರಿಸ್ಥಿತಿಯನ್ನು ಅವರೂ ಸ್ಥಳದಲ್ಲಿಯೇ ನೋಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರ ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದರು.

ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಮುಗಿಯಲಿದೆ. ಬಳಿಕ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ವರದಿಯನ್ನು ಆಧರಿಸಿ ನಾವು ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.

₹46 ಸಾವಿರ ಕೋಟಿ ನಷ್ಟ : ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು ₹46 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಇದರಲ್ಲಿ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕೇಂದ್ರ ತಂಡದವರಿಗೂ ಈ ಕುರಿತು ಮನವಿ ಮಾಡಿದ್ದೇವೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಕೇಂದ್ರಕ್ಕೆ ಅಂತಿಮವಾಗಿ ಮೆಮೊರಾಂಡಮ್ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಂದು ನಿಯೋಗದೊಂದಿಗೆ ತೆರಳಬೇಕು ಎಂಬ ಯೋಚನೆ ಮಾಡಿದ್ದೇವೆ. ನಿಯೋಗ ತೆರಳಿದಾಗಲೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತೇವೆ ಎಂದು ತಿಳಿಸಿದರು.

ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕಗಳು ಏಕಾಏಕಿ ಹೆಚ್ಚಳವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಈಗ ಕಾಸ್ಟ್ ಆಫ್ ಲಿವಿಂಗ್ ಹೆಚ್ಚುತ್ತಿದೆ. ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿರುವಾಗ ಸ್ವಾಭಾವಿಕವಾಗಿ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಇದು ಸಹಜವಾಗಿ ಆಗುವಂತಹದ್ದು ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಕೆಲವು ಶುಲ್ಕಗಳನ್ನು ಮಾರ್ಜಿನಲ್ ಆಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮರುಪರಿಶೀಲನೆ ಕುರಿತು ಚರ್ಚೆ : ಅನೇಕ ಕಾರಣಗಳಿಂದ ಹಿಂದೆ 79ಎ, 79ಬಿ ಕಲಂಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಅದನ್ನು ಪರಿಶೀಲಿಸುತ್ತಿದ್ದೇವೆ ಎಂದರು.

ಪರಿಶೀಲನೆ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ. ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಬಿದ್ದರೆ, ಅದನ್ನು ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಬರದ ಪರಿಣಾಮ ಜಿಎಸ್‌ಟಿ ಸಂಗ್ರಹದ ಮೇಲೂ ಬೀಳುವ ಸಾಧ್ಯತೆ: ಕರ್ನಾಟಕವು ನಿರಂತರವಾಗಿ ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿಯೂ ರಾಜ್ಯದ ವಾದವನ್ನು ಮಂಡಿಸಿದ್ದೇವೆ ಎಂದರು.

ಮುಖ್ಯಮಂತ್ರಿಗಳು ಕೃಷ್ಣ ಬೈರೇಗೌಡ ಅವರನ್ನು ಜಿಎಸ್ಟಿ ಕೌನ್ಸಿಲ್ ಸಭೆಗಳಿಗೆ ಡೆಪ್ಯುಟ್ ಮಾಡುತ್ತಿದ್ದರು. ಅವರು ರಾಜ್ಯದ ಪರವಾಗಿ ಏನೆಲ್ಲ ಹೇಳಬೇಕೋ ಅದನ್ನು ಮಂಡಿಸುತ್ತಿದ್ದರು ಎಂದು ಹೇಳಿದರು.

ಇಂದು ರಾಜ್ಯದಲ್ಲಿ ಬರ ಇದೆ. ನಮಗೆ ಬೆಳೆ ನಷ್ಟವಾಗಿದೆ. ಇದರ ಪರಿಣಾಮ ಪ್ರತಿಯೊಂದು ಕ್ಷೇತ್ರದ ಮೇಲೂ ಬೀಳುತ್ತದೆ. ಸ್ವಾಭಾವಿಕವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಈಗಾಗಲೇ ಹೇಳುತ್ತಿದ್ದಾರೆ ಎಂದು ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ. ಅದಕ್ಕಾಗಿ ಅಗತ್ಯವಾದ ಬಫರ್ ಅನ್ನೂ ನಾವು ಇಟ್ಟುಕೊಂಡಿದ್ದೇವೆ. ಜಿಎಸ್ಟಿ ಸಂಗ್ರಹವನ್ನು ಹೆಚ್ಚಿಸಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನೂ ನೋಡುತ್ತಿದ್ದೇವೆ ಎಂದರು.

ರಾಜ್ಯ ಹಿಂದೆಂದೂ ನೋಡದಂತಹ ಬರವನ್ನು ಎದುರಿಸುತ್ತಿದೆ. ಅದರ ಪರಿಣಾಮ ಖಂಡಿತವಾಗಿ ಎಲ್ಲ ಕ್ಷೇತ್ರಗಳ ಮೇಲೂ ಬೀಳುತ್ತದೆ. ಜಿಎಸ್‌ಟಿ ಮೇಲೂ ಪರಿಣಾಮ ಬೀಳುತ್ತದೆ ಎಂದು ಹೇಳಿದರು.

ಫಾರಂ-7 ದುರುಪಯೋಗ, ಸಾಕ್ಷ್ಯ ಸಹಿತ ದೂರು :  ಫಾರಂ-7 ದುರುಪಯೋಗದ ಕುರಿತು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ ಅವರು, ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷ್ಯ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡ್ ಆಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ ಎಂದರು.

ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್ 7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.

ಒಂದೇ ಒಂದು ಸಮುದಾಯದವರನ್ನು ಗುರುತಿಸಿಕೊಂಡು, ಫಾರಂಗಳನ್ನು ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನು ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದರು.

ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಏಳು ದಿನಗಳ ಸಮಯ ಕೊಟ್ಟು, ನಂತರ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!