ಸುರಪುರ, ಏ.19: ಬೀದರ–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಲಿಂಗಸೂರು–ಹತ್ತಿಗೂಡೂರು ಭಾಗದ ದುರವಸ್ಥೆ ವಿರುದ್ಧ ಸುರಪುರದ ಸಾಮಾಜಿಕ ಹೋರಾಟಗಾರರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಹೆದ್ದಾರಿಯ ದುಸ್ಥಿತಿಯಿಂದ ವರ್ಷದಲ್ಲಿ ನೂರಾರು ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಕ್ಷಣ ರಸ್ತೆ ಸುಧಾರಣೆ ಕೈಗೊಳ್ಳಬೇಕು ಹಾಗೂ ಅಪಘಾತಗಳಲ್ಲಿ ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ అనంతರ ಹೋರಾಟಗಾರರು ತಹಶೀಲ್ದಾರರ ಮೂಲಕ ಸರ್ಕಾರದ ಉನ್ನತ ಅಧಿಕಾರಿಗಳು, ಪ್ರಮುಖ ಮಂತ್ರಿಗಳು, ಶಾಸಕರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಇದೇ ಮನವಿಯನ್ನು ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲಬುರಗಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಕೂಡ ಸಲ್ಲಿಸಲಾಗಿದೆ.
ಶಾಂತಾಪುರ, ತಿಂಥಣಿ, ಬಂಡೋಳಿ, ದಾದಲಪುರ, ಲಿಂಗದಹಳ್ಳಿ, ಅರಳಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಭಾರೀ ಹಾನಿಗೊಂಡಿದ್ದು ಅಪಘಾತಗಳು ಸಾಮಾನ್ಯವಾಗಿವೆ. ಕಳೆದ ಎರಡು ದಶಕಗಳಿಂದ ನಿರ್ವಹಣೆ ಇಲ್ಲದಂತೆ ಕಾಣುತ್ತಿರುವ ಈ ರಸ್ತೆಯಲ್ಲಿ ಮಾರಣಾಂತಿಕ ಗುಂಡಿಗಳು ಉಂಟಾಗಿವೆ. ಟೆಂಡರ್ ಕರೆದಿದ್ದರೂ ಕಾಮಗಾರಿ ಆರಂಭವಾಗದಿರುವುದನ್ನು ಹೋರಾಟಗಾರರು ಪ್ರಶ್ನಿಸಿದ್ದಾರೆ.
ಈ ಭಾಗದಲ್ಲೇ ವರ್ಷಕ್ಕೆ 50ರಿಂದ 60 ಮಂದಿ ಸಾವನ್ನಪ್ಪುತ್ತಿರುವುದಾಗಿ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಹತ್ತಿಗೂಡೂರು–ತಿಂಥಣಿ ನಡುವಿನ ಪ್ರದೇಶದಲ್ಲಿ ನೂರಾರು ಅಪಘಾತಗಳು ನಡೆದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.
ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿ, ಅಪಘಾತಗಳನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಈ ರಸ್ತೆಯಲ್ಲಿ ನಡೆದ ಭೀಕರ ಅಪಘಾತಗಳ ವಿವರಗಳನ್ನು ಅಧಿಕಾರಿಗಳಿಗೆ ತಿಳಿಸಿದರು.
ಗೋಲಪಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವರದಾನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವಿಂದ್ರಪ್ಪ ಮೇಟಿ, ಗಂಗಾಧರ ನಾಯಕ, ರಾಮು ನಾಯಕ ಅರಳಹಳ್ಬಳಿ, ಲಭೀಮ ನಾಯಕ, ಮರಿಲಿಂಗಪ್ಪ ಗುಡಿಮನಿ, ಹನುಮಂತ ಮನ್ನಾಪುರಿ, ಶರಣು ಮಕಾಶಿ, ಯಲ್ಲಪ್ಪ ಆಲ್ದರ್ತಿ, ಮಲ್ಲಿಕಾರ್ಜುನ್, ರವಿ ಅಂಬಿಗೇರ್, ಅಯ್ಯಣ್ಣ ಹಾಲಬಾವಿ, ಶರಣಗೌಡ ಪೋಲಿಸ್ ಪಾಟೀಲ್, ಮೌನೇಶ್ ಕವಲ್ದಾರ, ರತ್ನರಾಜ ಶಾಲಿಮನಿ, ಬೆವರಾಜ ಪೋಲಿಸ್ ಪಾಟೀಲ್ ದಳಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಸುರಪುರ ತಹಶೀಲ್ದಾರರು ಮನವಿ ಸ್ವೀಕರಿಸಿದರು.