ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೀವು ಇನ್ಮುಂದೆ ದಿನಸಿ ಅಥವಾ ತರಕಾರಿ ತರಲು ಅಂಗಡಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಚೀಲ ತೆಗೆದುಕೊಂಡು ಹೋಗದಿದ್ದರೆ ನಿಮ್ಮ ಜೇಬಿಗೆ ದಂಡದ ಬಿಸಿ ತಟ್ಟುವುದು ಖಚಿತ!.
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ, ನಗರದಲ್ಲಿ ನಿಷೇಧಿತ ಏಕ ಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್ ಕವರ್ಗಳ ನಿಯಂತ್ರಣಕ್ಕೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ನಗರಸಭೆಯ ಆರೋಗ್ಯ ನಿರೀಕ್ಷಕರಾದ ಹೀನಾ ಕೌಸರ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಅಂಗಡಿಗಳಿಂದ ನಿಷೇಧಿತ ಪ್ಲಾಸ್ಟಿಕ್ ಕವರ್ಗಳಲ್ಲಿ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ದಂಡದ ಜೊತೆಗೆ, ಪರಿಸರ ರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಮನೆಯಿಂದಲೇ ಮರುಬಳಕೆ ಮಾಡಬಹುದಾದ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ತರಬೇಕೆಂದು ಗ್ರಾಹಕರಿಗೂ ಹಾಗೂ ಪ್ಲಾಸ್ಟಿಕ್ ನೀಡದಂತೆ ಅಂಗಡಿ ಮಾಲೀಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ ಜಾಗೃತಿ ಮೂಡಿಸಲಾಯಿತು.
ಪ್ರಮುಖ ಮನವಿ: ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸಾರ್ವಜನಿಕರು ಹಾಗೂ ವರ್ತಕರು ನಗರಸಭೆಯೊಂದಿಗೆ ಸಹಕರಿಸಬೇಕು ಮತ್ತು ಕಡ್ಡಾಯವಾಗಿ ಬಟ್ಟೆ ಚೀಲಗಳನ್ನೇ ಬಳಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.