ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಬರಿನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕೌಟುಂಬಿಕ ಕಲಹಕ್ಕೆ ಮಧ್ಯಸ್ಥಿಕೆ ವಹಿಸಿದ್ದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಸಾರ್ವಜನಿಕರ ಎದುರೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ನಿನ್ನೆ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಈ ದಾಳಿ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಸಯ್ಯದ್ ಇಲ್ಯಾಸ್ ಪಾಷ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟಿತ್ತು. ಈ ವೇಳೆ ಸಯ್ಯದ್ ಇಲ್ಯಾಸ್ ಪಾಷ ಅವರು ಮಧ್ಯಪ್ರವೇಶಿಸಿ ಜಗಳವನ್ನು ತಿಳಿಗೊಳಿಸಿ ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದರು. ಆದರೆ, ಈ ಸಂಧಾನದ ಬಳಿಕವೂ ಉಭಯ ಬಣಗಳ ನಡುವೆ ಸಂಘರ್ಷ ಮುಂದುವರಿದು, ಪರಸ್ಪರ ದೂರು-ಪ್ರತಿದೂರು ದಾಖಲಾಗಿ ಕೊನೆಗೆ ಎಫ್‌ಐಆರ್ ಹಂತ ತಲುಪಿತ್ತು.
ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರಿಂದ ತೀವ್ರ ಆಕ್ರೋಶಗೊಂಡಿದ್ದ ಸಲ್ಮಾನ್ ಎಂಬಾತ, ಇದಕ್ಕೆ ಇಲ್ಯಾಸ್ ಪಾಷ ಅವರೇ ಕಾರಣವೆಂದು ದ್ವೇಷ ಸಾಧಿಸುತ್ತಿದ್ದನು. ನಿನ್ನೆ ರಾತ್ರಿ ಶಬರಿನಗರದ ಮುಖ್ಯರಸ್ತೆಯಲ್ಲಿ ಜನರ ಓಡಾಟವಿರುವಾಗಲೇ ಏಕಾಏಕಿ ಇಲ್ಯಾಸ್ ಪಾಷ ಅವರ ಮೇಲೆ ಎರಗಿದ ಸಲ್ಮಾನ್, ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ:
ಜನನಿಬಿಡ ರಸ್ತೆಯಲ್ಲೇ ನಡೆದ ಈ ರಕ್ತಸಿಕ್ತ ದಾಳಿಯ ಸಂಪೂರ್ಣ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಇಲ್ಯಾಸ್ ಪಾಷ ಅವರನ್ನು ತಕ್ಷಣವೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಕೊತ್ತನೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸಲ್ಮಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.