ಬೆಂಗಳೂರು: ರಾಜಧಾನಿಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ನಗರದ ಪುಲಕೇಶಿನಗರದಲ್ಲಿ ರ್ಯಾಪಿಡೋ ಬೈಕ್ ಚಾಲಕ ಸೈಯದ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಚಾಲಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೂರು ದಿನಗಳ ಹಿಂದೆ ಯುವತಿಯು ಪುಲಕೇಶಿನಗರದಲ್ಲಿದ್ದ ತಮ್ಮ ಮನೆಗೆ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಸೈಯದ್ ರೈನ್‌ಕೋಟ್ ನೀಡುವ ನೆಪದಲ್ಲಿ ಬಣ್ಣಬಣ್ಣದ ಮಾತುಗಳನ್ನಾಡಿ ಯುವತಿಯನ್ನು ಅನಾವಶ್ಯಕವಾಗಿ ಮಾತನಾಡಿಸಲು ಯತ್ನಿಸಿದ್ದಾನೆ. ಯುವತಿ ಬೇಡವೆಂದು ಸ್ಪಷ್ಟವಾಗಿ ನಿರಾಕರಿಸಿದರೂ ಆತ ತನ್ನ ಕಿರಿಕಿರಿ ಮುಂದುವರಿಸಿದ್ದಾನೆ. ತಲುಪಬೇಕಾದ ಸ್ಥಳಕ್ಕೆ ಡ್ರಾಪ್ ಮಾಡಿದ ಬಳಿಕ, ಹೆಲ್ಮೆಟ್ ವಾಪಸ್ ಪಡೆಯುವಾಗ ಯುವತಿಯ ಕೈ ಸವರಲು ಯತ್ನಿಸಿದ್ದಾನೆ.
ಆನ್‌ಲೈನ್ ಪಾವತಿ ವೇಳೆಯೂ ಸ್ಕ್ಯಾನರ್ ಕೆಲಸ ಮಾಡುತ್ತಿಲ್ಲವೆಂದು ನಾಟಕವಾಡಿ ಯುವತಿಯ ಫೋನ್ ನಂಬರ್ ಪಡೆಯಲು ಸಂಚು ರೂಪಿಸಿದ್ದಾನೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದ ಮೇಲೂ ಅಲ್ಲಿಂದ ತೆರಳದೆ ಯುವತಿಯನ್ನೇ ಗುರಾಯಿಸಿ ನಿಂತು ಭಯದ ವಾತಾವರಣ ನಿರ್ಮಿಸಿದ್ದಾನೆ. ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಆತನಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರೂ ಆತ ಅಲ್ಲಿಯೇ ನಿಂತು ವಿಕೃತವಾಗಿ ವರ್ತಿಸಿದ್ದಾನೆ. ಈ ಕಹಿ ಅನುಭವದಿಂದ ಬೆಚ್ಚಿಬಿದ್ದ ಯುವತಿ, ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವಾಗ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಆರೋಪಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.