ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಅತ್ಯಂತ ನೋವಿನ ಹಾಗೂ ಗಮನೆಸೆಳೆಯುವ ಘಟನೆಯೊಂದು ವರದಿಯಾಗಿದೆ. ಸಂಬಂಧದಲ್ಲಿ ಸೋದರನಾಗಿರುವ ವ್ಯಕ್ತಿಯೊಂದಿಗೆ ಪತ್ನಿ ನಡೆಸುತ್ತಿದ್ದ ಅಕ್ರಮ ಸಂಬಂಧ ಹಾಗೂ ನಿರಂತರ ಕಿರುಕುಳಕ್ಕೆ ಮನನೊಂದ ಆಟೋ ಚಾಲಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು 35 ವರ್ಷದ ಮುನಿಕೃಷ್ಣ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದರು. ಇವರಿಗೆ 10 ವರ್ಷಗಳ ಹಿಂದೆ ನಯನಾ ಎಂಬುವವರೊಂದಿಗೆ ಮದುವೆಯಾಗಿದ್ದು, ದಂಪತಿಗೆ 6 ವರ್ಷದ ಗಂಡು ಮಗನಿದ್ದಾನೆ. ಪ್ರಸ್ತುತ ನಯನಾ ಅವರು ಎರಡನೇ ಮಗುವಿನ ಗರ್ಭಿಣಿಯಾಗಿದ್ದರು. ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತಿದ್ದರೂ, ಮುನಿಕೃಷ್ಣನ ಸಂಬಂಧಿಯೇ ಆದ ಕ್ಯಾಬ್ ಡ್ರೈವರ್ ಕುಮಾರ ಎಂಬಾತ ಇವರ ಸಂಸಾರದಲ್ಲಿ ಹುಳಿ ಹಿಂಡಿದ್ದಾನೆ.
ಮುನಿಕೃಷ್ಣ ಆಟೋ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಆತನ ಮನೆಗೆ ಎಂಟ್ರಿ ಕೊಡುತ್ತಿದ್ದ ಕುಮಾರ, ನಯನಾಳ ಜೊತೆ ಅನೈತಿಕ ಸಂಬಂಧ ಮುಂದುವರೆಸಿದ್ದ. ಇವರ ಕೃತ್ಯದ ಅಸಭ್ಯ ಫೋಟೋಗಳು ಮತ್ತು ವಿಡಿಯೋಗಳನ್ನು ಖುದ್ದು ಕುಮಾರನೇ ಮುನಿಕೃಷ್ಣನ ವಾಟ್ಸಾಪ್ಗೆ ಕಳುಹಿಸಿದ್ದರಿಂದ ಈ ಅಕ್ರಮ ಸಂಬಂಧ ಬಯಲಾಗಿತ್ತು. ವಿಚಾರ ತಿಳಿದು ಪತ್ನಿ ನಯನಾ ತವರು ಮನೆ ಸೇರಿದ್ದಲ್ಲದೆ, ಕುಮಾರ ರಸ್ತೆಯಲ್ಲಿ ಸಿಕ್ಕಾಗೆಲ್ಲಾ ಮುನಿಕೃಷ್ಣನಿಗೆ ನಿಂದಿಸಿ, ನಯನಾ ಹೊಟ್ಟೆಯಲ್ಲಿರುವ ಮಗು ತನ್ನದೇ ಎಂದು ಹೇಳಿ ತೀವ್ರ ಮಾನಸಿಕ ಹಿಂಸೆ ಮತ್ತು ಟಾರ್ಚರ್ ನೀಡುತ್ತಿದ್ದ.
ಈ ಎಲ್ಲ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿದ್ದ ಮುನಿಕೃಷ್ಣ, ಸಾಯುವ ಮುನ್ನ ದಿನ ತನ್ನ ಸಹೋದರನ ಬಳಿ ನೋವನ್ನು ತೋಡಿಕೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹವೆಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತಾದರೂ, ಬಳಿಕ ಸೋದರ ನೀಡಿದ ಮಾಹಿತಿಯಿಂದ ಅನೈತಿಕ ಸಂಬಂಧವೇ ಸಾವಿಗೆ ಕಾರಣ ಎಂಬುದು ಗೊತ್ತಾಗಿದೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.