ಶಿವಮೊಗ್ಗ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂಬ ಕಾರಣಕ್ಕೆ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಿಗೆ ಅತಿಥಿ ಶಿಕ್ಷಕಿಯೊಬ್ಬರು ಕೋಲಿನಿಂದ ರಕ್ತ ಬರುವಂತೆ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ.
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ರಕ್ಷಿತಾ ಎಂಬ ಅತಿಥಿ ಶಿಕ್ಷಕಿ ಮಕ್ಕಳ ಮೇಲೆ ಈ ಕ್ರೌರ್ಯ ಮೆರೆದಿದ್ದಾರೆ.
ರಕ್ತ ಬರುವಂತೆ ಮನಸೋಇಚ್ಛೆ ಹಲ್ಲೆ
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎರಡು, ಮೂರು ಮತ್ತು ನಾಲ್ಕನೇ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಕಿ ಕೋಲಿನಿಂದ ಅಮಾನವೀಯವಾಗಿ ಹೊಡೆದಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಶಿಕ್ಷಕಿ, ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬರುವ ಮಟ್ಟಿಗೆ ಥಳಿಸಿದ್ದಾರೆ. ಮನೆಗೆ ತೆರಳಿದ ಮಕ್ಕಳ ಬೆನ್ನಿನ ಮೇಲಿನ ಗಾಯಗಳನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ.
ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಬೇಕಾದ ಶಿಕ್ಷಕಿಯೇ ಈ ರೀತಿ ರಾಕ್ಷಸೀ ಪ್ರವೃತ್ತಿ ಪ್ರದರ್ಶಿಸಿರುವುದಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಅತಿಥಿ ಶಿಕ್ಷಕಿ ರಕ್ಷಿತಾ ವಿರುದ್ಧ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..